ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾಯಿಯ ಮಮತೆ ಸಿಗಬೇಕಿದ್ದ ಐದು ವರ್ಷದ ಪುಟ್ಟ ಬಾಲಕಿಯ ಮೇಲೆ ಮಲತಾಯಿಯೇ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರ ಕೇರಳದ ಕಾಂಜಿಕೋಡ್ ಬಳಿ ಬೆಳಕಿಗೆ ಬಂದಿದೆ.
ಕಳೆದ ವಾರ ಬಾಲಕಿಯು ಮಲಗಿದ್ದಾಗ ಹಾಸಿಗೆಯಲ್ಲೇ ಮೂತ್ರ ವಿಸರ್ಜನೆ ಮಾಡಿದ್ದಾಳೆ ಎಂಬ ಕ್ಷುಲ್ಲಕ ಕಾರಣಕ್ಕೆ ಕೋಪಗೊಂಡ ಬಿಹಾರ ಮೂಲದ ಮಲತಾಯಿ, ಮಗುವಿನ ಗುಪ್ತಾಂಗದ ಮೇಲೆ ಬರೆ ಎಳೆದು ಕ್ರೌರ್ಯ ಮೆರೆದಿದ್ದಾಳೆ. ಈ ನೋವನ್ನು ಮೌನವಾಗಿಯೇ ನುಂಗಿದ್ದ ಮಗು ಅಂಗನವಾಡಿಗೆ ಹೋದಾಗ, ಅಲ್ಲಿ ಕುಳಿತುಕೊಳ್ಳಲು ಪಡುತ್ತಿದ್ದ ಕಷ್ಟವನ್ನು ಗಮನಿಸಿದ ಶಿಕ್ಷಕಿ ಪ್ರೀತಿಯಿಂದ ವಿಚಾರಿಸಿದಾಗ ಈ ಭೀಕರ ಸತ್ಯ ಹೊರಬಂದಿದೆ.
ಕೂಡಲೇ ಮಗುವನ್ನು ತಪಾಸಣೆ ನಡೆಸಿದ ಶಿಕ್ಷಕಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದು, ಆಕೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮಹಿಳೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಬಾಲ ನ್ಯಾಯ ಕಾಯ್ದೆ ಅಡಿಯಲ್ಲಿ ಕಠಿಣ ಪ್ರಕರಣಗಳನ್ನು ದಾಖಲಿಸಲಾಗಿದೆ.
ಬಂಧಿತ ಮಹಿಳೆಯು ಈ ಮೊದಲೂ ಮಗುವಿನ ಮೇಲೆ ಇಂತಹ ಹಲ್ಲೆಗಳನ್ನು ನಡೆಸುತ್ತಿದ್ದಳು ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಪೊಲೀಸರು ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದಾರೆ. ಸದ್ಯ ನೊಂದ ಬಾಲಕಿಯು ಮಕ್ಕಳ ಕಲ್ಯಾಣ ಸಮಿತಿಯ ಸುರಕ್ಷಿತ ಆರೈಕೆಯಲ್ಲಿದ್ದಾಳೆ.

