ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಪೂರ್ವ ಸಭೆಯಲ್ಲಿ ಭಾಗವಹಿಸಿದ ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಕರ್ನಾಟಕಕ್ಕೆ ಬರಬೇಕಾದ ಬಾಕಿ ಅನುದಾನ ಹಾಗೂ ಹೊಸ ಯೋಜನೆಗಳ ಬಗ್ಗೆ ಗಟ್ಟಿ ಧ್ವನಿ ಎತ್ತಿದ್ದಾರೆ.
ಪ್ರಮುಖವಾಗಿ , ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಷಿಸಿದ್ದ 5,300 ಕೋಟಿ ರೂ. ಈವರೆಗೂ ಬಿಡುಗಡೆಯಾಗಿಲ್ಲ. ಈ ಬಾರಿ ಬಜೆಟ್‌ನಲ್ಲಿ ಹಣ ನೀಡಲೇಬೇಕು ಎಂದು ಒತ್ತಾಯಿಸಿದರು.
15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ 11,495 ಕೋಟಿ ರೂ. ವಿಶೇಷ ಅನುದಾನವನ್ನು ಕೇಂದ್ರ ಸರ್ಕಾರ ತಡೆಹಿಡಿದಿದ್ದು, ಅದನ್ನು ಕೂಡಲೇ ಬಿಡುಗಡೆ ಮಾಡಲು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರ್ಕಾರ ನೀಡುವಷ್ಟೇ ಸಮಾನ ಮೊತ್ತದ ಅನುದಾನವನ್ನು ಕೇಂದ್ರವೂ ನೀಡಬೇಕು. ಅದರೊಂದಿಗೆ ಮಲೆನಾಡು, ಕರಾವಳಿ ಹಾಗೂ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದರು. ಕಳೆದ 12 ವರ್ಷಗಳಿಂದ ವೃದ್ಧಾಪ್ಯ ಮತ್ತು ವಿಧವಾ ವೇತನ ಏರಿಕೆಯಾಗಿಲ್ಲ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ಕಾಲಕ್ಕೆ ತಕ್ಕಂತೆ ಪರಿಷ್ಕರಿಸಬೇಕು ಎಂದು ಮನವಿ ಮಾಡಿದರು.
ಬಡವರ ವಸತಿ ಯೋಜನೆಗಳಿಗೆ ಕೇಂದ್ರ ನೀಡುವ ಸಹಾಯಧನವನ್ನು ಹೆಚ್ಚಿಸಬೇಕು ಎಂಬುದು ರಾಜ್ಯದ ಪ್ರಮುಖ ಬೇಡಿಕೆಯಾಗಿದೆ. ಹಿಂದಿನ ಮನವಿಗಳನ್ನು ಕೇಂದ್ರ ತಿರಸ್ಕರಿಸುತ್ತಾ ಬಂದಿದ್ದರೂ, ರಾಜ್ಯದ ಹಿತದೃಷ್ಟಿಯಿಂದ ನಾವು ನಿರಂತರವಾಗಿ ಈ ಒತ್ತಾಯಗಳನ್ನು ಮಂಡಿಸುತ್ತಲೇ ಇರುತ್ತೇವೆ ಎಂದು ಕೃಷ್ಣ ಬೈರೇಗೌಡ ಈ ಸಂದರ್ಭದಲ್ಲಿ ತಿಳಿಸಿದರು.


