ಹೊಸದಿಗಂತ ಡಿಜಿಟಲ್ ಡೆಸ್ಕ್:
ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಬಂಧನದ ಬಳಿಕ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಅಮೆರಿಕ ಬಂಧಿಸಬಹುದು ಎನ್ನುವ ಚರ್ಚೆಗಳು ಪ್ರಾರಂಭವಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ , ಉಕ್ರೇನ್ ವಿರುದ್ಧ ರಷ್ಯಾ ನಡೆಸಿದ ದಾಳಿ ಖಂಡನೀಯವಾದರೂ ರಷ್ಯಾದ ವಿರುದ್ಧ ಅಂತಹ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದರು.
ಮಡುರೊ ಬಳಿಕ ಪುಟಿನ್ ಅವರನ್ನು ಸೆರೆ ಹಿಡಿಯಬಹುದು ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಅವರ ಹೇಳಿಕೆ ಬಳಿಕ ಟ್ರಂಪ್ ಸ್ಪಷ್ಟನೆ ನೀಡಿದರು.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬಂಧನ ಅಗತ್ಯವೆಂದು ನಾನು ಭಾವಿಸುವುದಿಲ್ಲ. ನಾವು ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಲಿದ್ದೇವೆ ಎಂದು ಭಾವಿಸುತ್ತೇನೆ ಎಂದು ಹೇಳಿದರು.
ರಷ್ಯಾ ಮತ್ತು ಉಕ್ರೇನ್ ಯುದ್ಧ ಕೊನೆಗೊಳ್ಳದಿರುವುದು ತುಂಬಾ ನಿರಾಸೆಯಾಗಿದೆ. ನಾನು ಎಂಟು ಯುದ್ಧಗಳನ್ನು ಕೊನೆಗೊಳಿಸಿದೆ. ಇದು ಕೂಡ ಅತ್ಯಂತ ಸುಲಭವಾಗಿ ಕೊನೆಯಾಗಬಹುದು ಎಂದು ಭಾವಿಸಿದೆ. ಆದರೆ ಸಾಧ್ಯವಾಗಿಲ್ಲ ಎಂದರು.
ಉಕ್ರೇನ್‌ನಲ್ಲಿ ನಡೆದ ಯುದ್ಧ ಅಪರಾಧಗಳಿಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಿರುದ್ಧ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಝೆಲೆನ್ಸ್ಕಿ ಅವರು ಮಡುರೊ ಬಂಧನದ ಅನಂತರ ಪುಟಿನ್ ಬಂಧನವಾಗುತ್ತದೆ ಎಂದಿದ್ದರು.

