March 19, 2026
Thursday, March 19, 2026
spot_img

ಮಂಗಳೂರು ಲಿಟ್ ಫೆಸ್ಟ್‌ । ಮಹಾಭಾರತವಿಲ್ಲದೆ ‘ಪರ್ವ’ ಇಲ್ಲ: ಸಂದೀಪ್ ಬಾಲಕೃಷ್ಣ

ಹೊಸದಿಗಂತ ವರದಿ, ಮಂಗಳೂರು:

ಮಹಾಭಾರತವಿಲ್ಲದೆ ಪರ್ವ ಇಲ್ಲ. ಮಹಾಭಾರತದಲ್ಲಿದ್ದ ಪವಾಡಗಳನ್ನು, ತಮ್ಮ ಕಾದಂಬರಿಯ ಮೂಲಕ ನೈಜವಾಗಿ ಚಿತ್ರಿಸಿದವರು ಎಸ್.ಎಲ್.ಭೈರಪ್ಪನವರು ಎಂದು ಖ್ಯಾತ ಸಾಹಿತಿ ಸಂದೀಪ್ ಬಾಲಕೃಷ್ಣ ಹೇಳಿದರು.

ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ಶನಿವಾರ ‘ಭೈರಪ್ಪನವರ ಸಾಹಿತ್ಯದಲ್ಲಿ ಇತಿಹಾಸ ಪ್ರಜ್ಞೆ ಎಂಬ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವ್ಯಾಸರು ಬರೆದ ಮಹಾಭಾರತದ ಅಂತರಾಳವನ್ನು ಹಿಡಿದು, ಬೇರೆ ತರಹ ಬರೆದರು. ಅದು ಅವರ ಉತ್ಕೃಷ್ಟ ಕೃತಿ. ಬಹಳ ನೈಜವಾಗಿ ಮತ್ತು ಸವಿಸ್ತಾರವಾಗಿ ಆ ಕಾದಂಬರಿಯನ್ನು ಕಟ್ಟಿಕೊಟ್ಟಿದ್ದಾರೆ. ಅದಕ್ಕಾಗಿ ಅವರ ದೇಶ ಪರ್ಯಟನೆ ಮಾಡಿದ್ದಾರೆ. ಸಾಕಷ್ಟು ಅಧ್ಯಯನ ಮಾಡಿ ಬರೆದಿದ್ದಾರೆ. ಹಾಗಾಗಿ, ಆ ಕಾದಂಬರಿ ಅಷ್ಟು ಅದ್ಭುತವಾಗಿ ಮೂಡಿಬಂದಿದೆ ಎಂದರು.

ಕೆಲವರು ಎಸ್.ಎಲ್.ಬೈರಪ್ಪನವರನ್ನು ಗುರಿ ಮಾಡಿ ಸಾಕಷ್ಟು ತೊಂದರೆ ಕೊಟ್ಟರು. ಆದರೆ, ಭೈರಪ್ಪನವರು ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಾ ಹೋದರು ಎಂದವರು ಹೇಳಿದರು.

ಭೈರಪ್ಪ ತಮ್ಮ ಕಾದಂಬರಿಗಳಲ್ಲಿ ಯಾವತ್ತೂ, ಯಾರನ್ನೂ ಬೆಟ್ಟು ಮಾಡಿ ತೋರಿಸಲಿಲ್ಲ. ಆದರೆ, ಕಮ್ಯುನಿಸ್ಟರು ಮತ್ತು ಮಾರ್ಕಿಸ್ಟಿಸ್ಟರು ತಮ್ಮ ಹೆಗಲು ಮುಟ್ಟಿ ನೋಡಿಕೊಂಡು, ಬೈರಪ್ಪನವರ ವಿರುದ್ಧ ಹರಿಹಾಯುತ್ತಲೇ ಬಂದರು. ಅವರನ್ನೆಲ್ಲಾ ಬಯಲು ಮಾಡಿದ್ದಕ್ಕೆ ಬೈರಪ್ಪನವರ ವಿರುದ್ಧ ಸಿಟ್ಟು ತೀರಿಸಿಕೊಂಡರು. ಆದರೆ, ಭೈರಪ್ಪನವರು ಇದ್ಯಾವುದನ್ನೂ ಲೆಕ್ಕಿಸದೆ ತಮ್ಮ ಕೆಲಸ ಮಾಡುತ್ತಾ ಹೋದರು’ ಎಂದರು.

‘ಆವರಣ ಬಿಡುಗಡೆ ಆದಾಗ ಭುಗಿಲೆದ್ದ ವಿವಾದಗಳು, ಸಾರ್ಥ ಬಿಡುಗಡೆ ಆದಾಗ ಆಗಲಿಲ್ಲ ಎಂದ ಸಂದೀಪ್ ಬಾಲಕೃಷ್ಣ, ಸಾರ್ಥದಲ್ಲಿ ಆಕ್ರಮಣದ ಆರಂಭದ ಕುರಿತಾಗಿ ಬರೆದಿದ್ದರು. ಆದರೆ, ಆವರಣದಲ್ಲಿ ಆಳ್ವಿಕೆಯ ಕರಾಳತೆಯನ್ನು ಹಿಡಿದಿಟ್ಟರು. ಔರಂಗಜೇಬನಿಗಿಂತ ಕೆಲವು ರಾಜರು ಕ್ರೂರಿಗಳಾಗಿದ್ದರು. ಆದರೆ, ಔರಂಗಜೇಬ ಮೊಘಲರ ಕೊನೆಯ ರಾಜನಾಗುವುದರ ಜೊತೆಗೆ ದುರಂತ ಮತ್ತು ಅತ್ಯಂತ ಕ್ರೂರಿ ರಾಜನಾಗಿದ್ದ. ಆ ಕ್ರೂರತೆಯನ್ನು ತೋರಿಸುವ ಪ್ರಯತ್ನ ಮಾಡಿದರು’ ಎಂದರು.

ಭೈರಪ್ಪನವರು ಎಲ್ಲವನ್ನೂ ಓದುಗರ ಗ್ರಹಿಕೆಗೆ ಬಿಡುತ್ತಿದ್ದರು ಎಂದ ಅವರು, ಭೈರಪ್ಪನವರು ಯಾವುದನ್ನೂ ನೇರವಾಗಿ ಹೇಳುತ್ತಿರಲಿಲ್ಲ. ಪಾತ್ರಗಳ ಮೂಲಕ ಒಂದಿಷ್ಟು ವಿಷಯಗಳನ್ನು ಹೇಳುತ್ತಿದ್ದರು. ಏನು ಅರ್ಥ ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ ಎಂದು ಓದುಗರಿಗೆ ಬಿಡುತ್ತಿದ್ದರು’ ಎಂದರು.

ರೋಹಿತ್ ಚಕ್ರತೀರ್ಥ ಸಂವಾದ ನಡೆಸಿಕೊಟ್ಟರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !