ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಗಾಳ ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ನಡೆಸಿದ ದಾಳಿಯ ಸಂದರ್ಭ ದಾಖಲೆಗಳ ಕಳ್ಳತನ ಆರೋಪದ ಬಗ್ಗೆ ಕೋಲ್ಕತ್ತಾ ಪೊಲೀಸರು ಶನಿವಾರ ತನಿಖೆ ಆರಂಭಿಸಿದ್ದಾರೆ.
ಇತ್ತ ಇಡಿ ದಾಳಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಪಶ್ಚಿಮ ಬಂಗಾಳ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ‘ಕೇವಿಯಟ್’ ಸಲ್ಲಿಸಿದ್ದು, ಈ ಪ್ರಕರಣದಲ್ಲಿ ರಾಜ್ಯ ಸರ್ಕಾರದ ವಾದವನ್ನು ಆಲಿಸದೆ ಯಾವುದೇ ಪ್ರತಿಕೂಲ ಆದೇಶ ಅಥವಾ ನಿರ್ದೇಶನ ನೀಡಬಾರದು ಎಂದು ಮನವಿ ಮಾಡಿದೆ.
ಸಾಂವಿಧಾನಿಕ ನ್ಯಾಯಾಲಯಗಳಲ್ಲಿ, ಪ್ರತಿವಾದಿಯ ಅನುಪಸ್ಥಿತಿಯಲ್ಲಿ ಏಕಪಕ್ಷೀಯ ನಿರ್ಧಾರವಾಗುವುದನ್ನು ತಡೆಯಲು ಕೇವಿಯಟ್ ಸಲ್ಲಿಸಲಾಗುತ್ತದೆ.
ಇಡಿ ಆರೋಪ ಏನು?
ಕೋಟ್ಯಂತರ ರೂಪಾಯಿ ಮೌಲ್ಯದ ಕಲ್ಲಿದ್ದಲು ಕಳ್ಳಸಾಗಣೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಗುರುವಾರ ಕೋಲ್ಕತ್ತಾದಲ್ಲಿ ಐ-ಪ್ಯಾಕ್ ಕಚೇರಿ ಮೇಲೆ ದಾಳಿ ನಡೆಸಿತ್ತು. ಈ ದಾಳಿಯ ಸಂದರ್ಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸ್ಥಳಕ್ಕೆ ಆಗಮಿಸಿ, ತನಿಖಾಧಿಕಾರಿಗಳ ವಶದಲ್ಲಿದ್ದ ‘ಪ್ರಮುಖ ಸಾಕ್ಷ್ಯ’ಗಳನ್ನು (ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳು) ತೆಗೆದುಕೊಂಡು ಹೋಗಿದ್ದಾರೆ ಎಂದು ಇ.ಡಿ ಗಂಭೀರ ಆರೋಪ ಮಾಡಿದೆ. ಈ ಸಂಬಂಧ ಇಡಿ ಕೂಡ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ

