ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಷಯ ಸೃಷ್ಟಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಕಠಿಣ ನಿಲುವು ತಳೆದಿದೆ. ಈ ಹಿನ್ನೆಲೆ ಎಕ್ಸ್ (ಹಿಂದಿನ ಟ್ವಿಟ್ಟರ್) ಪ್ಲಾಟ್ಫಾರ್ಮ್ ತನ್ನ ಎಐ ಚಾಟ್ಬೋಟ್ ‘ಗ್ರೋಕ್’ ಮೂಲಕ ನಿರ್ಮಾಣವಾಗುತ್ತಿದ್ದ ಅಶ್ಲೀಲ ಕಂಟೆಂಟ್ ಕುರಿತು ತಪ್ಪು ಒಪ್ಪಿಕೊಂಡಿದ್ದು, ಭಾರತೀಯ ಕಾನೂನುಗಳಿಗೆ ಬದ್ಧವಾಗಿರುವುದಾಗಿ ಭರವಸೆ ನೀಡಿದೆ.
ಸರ್ಕಾರದ ಸೂಚನೆಯಂತೆ, ಭಾರತದಲ್ಲಿ ಗ್ರೋಕ್ ಮೂಲಕ ಸೃಷ್ಟಿಯಾಗಿದ್ದ ಸುಮಾರು 3,500 ಅಶ್ಲೀಲ ಕಂಟೆಂಟ್ಗಳನ್ನು ಎಕ್ಸ್ ಬ್ಲಾಕ್ ಮಾಡಿದ್ದು, ಈ ಕೃತ್ಯದಲ್ಲಿ ಭಾಗಿಯಾಗಿದ್ದ 600ಕ್ಕೂ ಹೆಚ್ಚು ಖಾತೆಗಳನ್ನು ಡಿಲೀಟ್ ಮಾಡಲಾಗಿದೆ. ಇನ್ನು ಮುಂದೆ ಎಐ ಮೂಲಕ ಅಶ್ಲೀಲ ಚಿತ್ರಗಳು ಮತ್ತು ವಿಷಯಗಳ ರಚನೆಗೆ ಅವಕಾಶ ನೀಡುವುದಿಲ್ಲ ಎಂದು ಎಕ್ಸ್ ಸ್ಪಷ್ಟಪಡಿಸಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: FOOD | ಬಿಸಿ ಬಿಸಿ ಮಶ್ರೂಮ್ ಸೂಪ್ ಕುಡೀತಿದ್ರೆ ಆಹಾ! ಅದ್ಭುತ ರುಚಿ
ಗ್ರೋಕ್ 2023ರಲ್ಲಿ ಬಿಡುಗಡೆಗೊಂಡ ಎಐ ಚಾಟ್ಬೋಟ್ ಆಗಿದ್ದು, “ಇಮ್ಯಾಜಿನ್” ಫೀಚರ್ ಮೂಲಕ ಚಿತ್ರ ರಚನೆ ಸಾಧ್ಯವಾಗುತ್ತಿತ್ತು. ಈ ಫೀಚರ್ನ್ನು ದುರುಪಯೋಗಪಡಿಸಿಕೊಂಡು ವ್ಯಕ್ತಿಗಳ ಚಿತ್ರಗಳನ್ನು ಅಸಭ್ಯವಾಗಿ ಪರಿವರ್ತಿಸುವ ಟ್ರೆಂಡ್ ಇತ್ತೀಚೆಗೆ ಹೆಚ್ಚಾಗಿತ್ತು.
ಈ ವಿಷಯಕ್ಕೆ ಸಂಬಂಧಿಸಿ ಇಂಡೋನೇಷ್ಯಾ ಗ್ರೋಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಬ್ರೆಜಿಲ್, ಫ್ರಾನ್ಸ್, ಜರ್ಮನಿ, ಮಲೇಷ್ಯಾ ಹಾಗೂ ಅಮೆರಿಕ ಸೇರಿದಂತೆ ಹಲವು ದೇಶಗಳು ತನಿಖೆಗೆ ಮುಂದಾಗಿವೆ. ಭಾರತ ಕೂಡ ಜನವರಿ 2ರಂದು ಎಕ್ಸ್ಗೆ ಎಚ್ಚರಿಕೆ ನೀಡಿದ್ದು, ಇದೀಗ ಅದರ ಪರಿಣಾಮವಾಗಿ ಕ್ರಮ ಕೈಗೊಳ್ಳಲಾಗಿದೆ.

