ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಮನಾಥ ದೇವಾಲಯದ ಮೇಲೆ ದಾಳಿ ನಡೆಸಿದವರು ಕಾಲದ ಜತೆಗೆ ಸಮಾಧಿಯಾಗಿದ್ದಾರೆ, ಆದರೆ ಸೋಮನಾಥ ಸಾವಿರ ವರ್ಷಗಳನ್ನೂ ಮೀರಿ ಅಚಲವಾಗಿ ನಿಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುಜರಾತ್ ಪ್ರವಾಸದ ವೇಳೆ ಸೋಮನಾಥದಲ್ಲಿ ನಡೆದ ಶೌರ್ಯ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಆತ್ಮಶಕ್ತಿಯನ್ನು ಸೋಮನಾಥ ದೇವಾಲಯ ಪ್ರತಿನಿಧಿಸುತ್ತದೆ ಎಂದರು.
1026ರಲ್ಲಿ ಘಜ್ನಿ ಸೋಮನಾಥ ದೇವಾಲಯದ ಮೇಲೆ ದಾಳಿ ನಡೆಸಿದ ಘಟನೆಗೆ ಸಾವಿರ ವರ್ಷಗಳು ಪೂರ್ಣಗೊಂಡಿವೆ. ಆ ದಾಳಿಗಳಲ್ಲಿ ವಿಗ್ರಹವನ್ನು ನಾಶಪಡಿಸಿ, ಸಂಪತ್ತನ್ನು ದೋಚಲಾಗಿತ್ತು. ಆದರೆ ಇತಿಹಾಸದಲ್ಲಿ ದಾಳಿ ಮಾಡಿದವರ ಹೆಸರುಗಳು ಮಸುಕಾದರೆ, ಸೋಮನಾಥ ಮಾತ್ರ ಶೌರ್ಯ ಮತ್ತು ಸ್ಥೈರ್ಯದ ಸಂಕೇತವಾಗಿ ಉಳಿದಿದೆ ಎಂದು ಪ್ರಧಾನಿ ಹೇಳಿದರು. ಧಾರ್ಮಿಕ ಮತಾಂಧತೆಯನ್ನು ಸಾಮಾನ್ಯ ದರೋಡೆ ಎಂದು ಬಿಂಬಿಸುವ ಪ್ರಯತ್ನಗಳು ನಡೆದಿದ್ದವು ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಇದನ್ನೂ ಓದಿ: FOOD | ಉತ್ತರ ಕರ್ನಾಟಕದ ವಿಶೇಷ ಖಾದ್ಯ ಜೋಳದ ತಾಲಿಪಟ್ಟು! ರೆಸಿಪಿ ಇಲ್ಲಿದೆ ನೋಡಿ!
ಸೋಮನಾಥ ದೇವಾಲಯದ ಪುನರ್ನಿರ್ಮಾಣಕ್ಕೆ 75 ವರ್ಷಗಳು ಪೂರ್ಣಗೊಂಡಿರುವುದನ್ನು ಉಲ್ಲೇಖಿಸಿದ ಮೋದಿ, ಭಗವಾನ್ ಶಿವನಿಗಾಗಿ ನಮ್ಮ ಪೂರ್ವಜರು ಪ್ರಾಣವನ್ನೇ ಪಣಕ್ಕಿಟ್ಟರು ಎಂದು ಸ್ಮರಿಸಿದರು. ಶೌರ್ಯ ಯಾತ್ರೆಯಲ್ಲಿ 108 ಕುದುರೆಗಳ ಸಾಂಕೇತಿಕ ಮೆರವಣಿಗೆ ಮೂಲಕ ವೀರ ಯೋಧರಿಗೆ ಗೌರವ ಸಲ್ಲಿಸಲಾಯಿತು.
ನಂತರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ, ಇಂದಿಗೂ ಸೋಮನಾಥದಲ್ಲಿ ಹಾರುವ ಧ್ವಜವೇ ಭಾರತದ ಶಕ್ತಿಯ ಸಾಕ್ಷಿ ಎಂದರು. ಸೋಮನಾಥ ಪುನರ್ನಿರ್ಮಾಣಕ್ಕೂ ವಿರೋಧಿಸಿದ್ದ ಶಕ್ತಿಗಳು ಇಂದೂ ಅಸ್ತಿತ್ವದಲ್ಲಿವೆ ಎಂದು ಎಚ್ಚರಿಸಿದ ಅವರು, ದೇಶ ಒಗ್ಗಟ್ಟಾಗಿ ಇರಬೇಕೆಂದು ಕರೆ ನೀಡಿದರು.

