ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡುವ ಅಭ್ಯಾಸ ನಿಮಗಿದೆಯೇ? ಹಾಗಿದ್ದರೆ ಈ ಸುದ್ದಿ ನಿಮ್ಮ ಕಣ್ಣು ಕೆಂಪಾಗಿಸಬಹುದು. ಹೋಟೆಲ್‌ಗೆ ಹೋಗಿ ತಿಂದರೆ ಕಮ್ಮಿ ಬೆಲೆ, ಅದೇ ಆಹಾರವನ್ನು ಆನ್‌ಲೈನ್ ಆ್ಯಪ್ ಮೂಲಕ ತರಿಸಿಕೊಂಡರೆ ದುಪ್ಪಟ್ಟು ಬೆಲೆ! ಇಂತಹದ್ದೊಂದು ಗಂಭೀರ ಚರ್ಚೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚು ಹಚ್ಚಿದೆ.
ನಳಿನಿ ಉನಾಗರ್ ಎಂಬುವವರು ಎಕ್ಸ್ ನಲ್ಲಿ ಹಂಚಿಕೊಂಡಿರುವ ಫೋಟೋವೊಂದು ಈಗ ವೈರಲ್ ಆಗಿದೆ. ಅವರು ಹೋಟೆಲ್‌ನಲ್ಲಿ ನೇರವಾಗಿ ಖರೀದಿಸಿದ ‘ಚೈನೀಸ್ ಭೇಲ್’ ಮತ್ತು ‘ಮಂಚೂರಿಯನ್’ ಬೆಲೆ ಕೇವಲ 320 ರೂ. ಆಗಿತ್ತು. ಆದರೆ, ಅದೇ ಹೋಟೆಲ್‌ನಿಂದ ಅದೇ ಪದಾರ್ಥಗಳನ್ನು ಆ್ಯಪ್ ಮೂಲಕ ಆರ್ಡರ್ ಮಾಡಲು ಹೋದಾಗ ಅದರ ಬೆಲೆ ಬರೋಬ್ಬರಿ 655 ರೂ. ತೋರಿಸಿದೆ! ಅಂದರೆ ಎಲ್ಲಾ ಡಿಸ್ಕೌಂಟ್ ಬಳಿಕವೂ ಗ್ರಾಹಕರು 550 ರೂ. ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಜೊಮ್ಯಾಟೋ ಸಂಸ್ಥೆ ಉತ್ತರಿಸಿದೆ. “ನಾವು ಕೇವಲ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತೇವೆ. ನಮ್ಮ ಆ್ಯಪ್‌ನಲ್ಲಿ ಆಹಾರದ ಬೆಲೆಯನ್ನು ನಿರ್ಧರಿಸುವ ಅಧಿಕಾರ ನಮಗಿಲ್ಲ, ಅದನ್ನು ಆಯಾ ರೆಸ್ಟೋರೆಂಟ್ ಮಾಲೀಕರೇ ನಿರ್ಧರಿಸುತ್ತಾರೆ,” ಎಂದು ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ.
ನೆಟ್ಟಿಗರು ಈ ಸ್ಪಷ್ಟನೆಯನ್ನು ಒಪ್ಪಲು ಸಿದ್ಧರಿಲ್ಲ. ಮೂಲಗಳ ಪ್ರಕಾರ, ಜೊಮ್ಯಾಟೋ ಮತ್ತು ಸ್ವಿಗ್ಗಿಯಂತಹ ಸಂಸ್ಥೆಗಳು ಪ್ರತಿ ಆರ್ಡರ್ ಮೇಲೆ ರೆಸ್ಟೋರೆಂಟ್ ಮಾಲೀಕರಿಂದ ಸುಮಾರು ಶೇ. 25 ರಿಂದ 35 ರಷ್ಟು ಕಮಿಷನ್ ಪಡೆಯುತ್ತವೆ. ಈ ಭಾರೀ ಮೊತ್ತದ ಕಮಿಷನ್ ಅನ್ನು ಭರಿಸಲು ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಆ್ಯಪ್‌ಗಳಲ್ಲಿ ಆಹಾರದ ಬೆಲೆಯನ್ನು ಹೆಚ್ಚಿಸುತ್ತಾರೆ. ಇದರಿಂದ ಹೋಟೆಲ್ ಮಾಲೀಕರಿಗೆ ನಷ್ಟವಿಲ್ಲದಿದ್ದರೂ, ಅಂತಿಮವಾಗಿ ಗ್ರಾಹಕರು ಮಾತ್ರ ತಮ್ಮ ಜೇಬಿಗೆ ಕತ್ತರಿ ಹಾಕಿಸಿಕೊಳ್ಳುತ್ತಿದ್ದಾರೆ.
ಪ್ಲಾಟ್‌ಫಾರ್ಮ್ ಫೀಸ್, ಡೆಲಿವರಿ ಚಾರ್ಜ್ ಮತ್ತು ಜಿಎಸ್‌ಟಿ ಹೆಸರಿನಲ್ಲಿ ಈಗಾಗಲೇ ಹೆಚ್ಚಿನ ಹಣ ವಸೂಲಿ ಮಾಡುವ ಆ್ಯಪ್‌ಗಳು, ಈಗ ಆಹಾರದ ಮೂಲ ಬೆಲೆಯಲ್ಲೇ ಇಷ್ಟು ದೊಡ್ಡ ವ್ಯತ್ಯಾಸ ಮಾಡುತ್ತಿರುವುದು ಎಷ್ಟು ಸರಿ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.


