ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ, ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಬದಲಾವಣೆ ಸದ್ಯಕ್ಕೆ ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಎಲ್ಲ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದಾರೆ.
ಸಂಕ್ರಾಂತಿ ಫಲದ ಪ್ರಕಾರ ಸದ್ಯಕ್ಕೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಯುಗಾದಿವರೆಗೂ ಈ ಸರ್ಕಾರಕ್ಕೆ ಯಾವುದೇ ಅಡ್ಡಿಯಿಲ್ಲ. ಸಿಎಂ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು ಯಾರ ಕೈಯಲ್ಲೂ ಸಾಧ್ಯವಿಲ್ಲ. ಅವರಾಗಿಯೇ ಅಧಿಕಾರ ಬಿಟ್ಟುಕೊಟ್ಟರೆ ಮಾತ್ರ ಬೇರೆಯವರಿಗೆ ಅವಕಾಶ ಸಿಗಬಹುದು. ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಜಿ. ಪರಮೇಶ್ವರ್ ಸೇರಿದಂತೆ ಹಲವರು ಸಿಎಂ ರೇಸ್‌ನಲ್ಲಿದ್ದಾರೆ. ಆದರೆ, ಯಾರಿಗೆ ‘ದಿವ್ಯ ಯೋಗ’ವಿದೆಯೋ ಅವರು ಮಾತ್ರ ಆ ಗದ್ದುಗೆ ಏರಲಿದ್ದಾರೆ. ಮುಂದಿನ ಬೆಳವಣಿಗೆಗಳ ಬಗ್ಗೆ ಯುಗಾದಿ ನಂತರ ತಿಳಿಸುವುದಾಗಿ ಶ್ರೀಗಳು ಮಾರ್ಮಿಕವಾಗಿ ನುಡಿದಿದ್ದಾರೆ.
ರಾಜಕೀಯದ ಜೊತೆಗೆ ಜಗತ್ತಿನ ಭವಿಷ್ಯದ ಬಗ್ಗೆಯೂ ಆತಂಕಕಾರಿ ಮುನ್ಸೂಚನೆ ನೀಡಿರುವ ಶ್ರೀಗಳು, 2026ರಲ್ಲಿ ಭೀಕರ ಯುದ್ಧ ಸಂಭವಿಸುವ ಲಕ್ಷಣಗಳಿವೆ ಎಂದಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾವು-ನೋವು ಹೆಚ್ಚಾಗಲಿದ್ದು, ಪ್ರಪಂಚದ ಶೇ. 60ರಷ್ಟು ಭಾಗ ನಾಶವಾಗುವುದು ಖಚಿತ ಎಂದು ಅವರು ಭೀತಿ ವ್ಯಕ್ತಪಡಿಸಿದ್ದಾರೆ.

