ಹೊಸದಿಗಂತ ವರದಿ, ಮಂಗಳೂರು:
ಎರಡು ದಿನಗಳ ಕಾಲ ಮಂಗಳೂರಿನಲ್ಲಿ ಸಾಹಿತ್ಯ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದ ಎಂಟನೇ ಆವೃತ್ತಿಯ ಮಂಗಳೂರು ಲಿಟ್ ಫೆಸ್ಟ್‌ಗೆ ಭಾನುವಾರ ಸಂಜೆ ತೆರೆಬಿದ್ದಿದೆ.
ಭಾರತ್ ಫೌಂಡೇಶನ್ ನೇತೃತ್ವದಲ್ಲಿ ಎರಡು ದಿನಗಳ ಕಾಲ ನಗರದ ಡಾ.ಟಿಎಂಎ ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜನೆಯಾದ ಸಾಹಿತ್ಯ ಹಬ್ಬ-ಲಿಟ್ ಫೆಸ್ಟ್‌ನಲ್ಲಿ ಸಾವಿರಾರು ಮಂದಿ ಸಾಹಿತ್ಯ ಪ್ರೇಮಿಗಳು ಭಾಗವಹಿಸುವ ಮೂಲಕ ಲಿಟ್‌ಫೆಸ್ಟ್‌ನ್ನು ಯಶಸ್ವಿಯಾಗಿಸಿದರು.
ಭಾರತದ ಗುಪ್ತಚರ ಸಂಸ್ಥೆಯಾದ ‘ರಾ’ದ ಮಾಜಿ ಮುಖ್ಯಸ್ಥರಾದ ವಿಕ್ರಂ ಸೂದ್, ವಿಶ್ವಸಂಸ್ಥೆಯಲ್ಲಿ ಭಾರತದ ಮೊದಲ ಮಹಿಳಾ ಖಾಯಂ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ರುಚಿರಾ ಕಾಂಬೋಜ್, ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ಟಿ.ಎಸ್.ತಿರುಮೂರ್ತಿ ಸೇರಿದಂತೆ ೬೫ಕ್ಕೂ ಅಧಿಕ ಚಿಂತಕರು ಲಿಟ್ ಫೆಸ್ಟ್‌ನಲ್ಲಿ ಭಾಗವಹಿಸಿದ್ದುದು ವಿಶೇಷವಾಗಿತ್ತು.
ಕಾರ್ಯಕ್ರಮದ ಸಮಾರೋಪ ಗೋಷ್ಠಿಯಾಗಿ ‘ಭೈರಪ್ಪನವರ ಬೆಳಕಲ್ಲಿ ಮುಂದೆ ಬೆಳೆಯಬಹುದಾದ ಸಾಹಿತ್ಯ’ ಎಂಬ ನಡೆದಿದ್ದು, ಶತಾವಧಾನಿ ಗಣೇಶ್ ಹಾಗೂ ಜಿಬಿ ಹರೀಶ್ ವಿಶೇಷ ಸಂವಾದ ನಡೆಸಿದರು. ಭಾರತ್ ಫೌಂಡೇಷನ್ ಟ್ರಸ್ಟಿ ಸುನೀಲ್ ಕುಲಕರ್ಣಿ ಧನ್ಯವಾದ ಸಲ್ಲಿಸಿದರು.
ಎರಡು ದಿನಗಳಲ್ಲಿ ಸಾವಿರಾರು ಜನರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಸಾಹಿತ್ಯ ಆಸಕ್ತರು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹಲವು ಯುವಕ ಯುವತಿಯರು ಎರಡು ದಿನಗಳು ಸಂಪೂರ್ಣವಾಗಿ ಕಾರ್ಯಕ್ರಮದಲ್ಲಿ ಬಾಗವಹಿಸಿ ಸಂಭ್ರಮಿಸಿದ್ದು ಯುವ ಜನತೆಗೆ ಇನ್ನೂ ಪುಸ್ತಕದ ಅಭಿರುಚಿ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಸಾಕ್ಷಿಯಂತಿತ್ತು. ಹಲವು ಪುಸ್ತಕದ ಮಳಿಗಗೆಳು, ಲೇಖಕರ ಜೊತೆ ಸಂವಾದ ಸೇರಿದಂತೆ ಹಲವು ಕಾರ್ಯಕ್ರಮಗಳು ಬಹಳ ಅಚ್ಚುಕಟ್ಟಾಗಿ ಹಾಗೂ ಶಿಸ್ತುಬದ್ಧ ಸಮಯಪಾಲನೆಯಿಂದ ಕಾರ್ಯಕ್ರಮ ನೆರವೇರಿತು.
ರಾಷ್ಟ್ರೀಯತೆ, ಪತ್ರಿಕೋದ್ಯಮ, ವಿಜ್ಞಾನ, ಸಾಹಿತ್ಯ, ಬೈರಪ್ಪನವರ ಚಿಂತನೆಯ ಕುರಿತು ಹಲವು ಚರ್ಚೆಗಳು ನಡೆದಿದ್ದು, ಎಲ್ಲ ಚರ್ಚೆಗಳನ್ನು ಬಹಳ ಗಂಭೀರವಾಗಿ ಕುಳಿತು ಪ್ರೇಕ್ಷಕರು ಆಸ್ವಾದಿಸಿದರು. ಒಂದೇ ಸಮಯಕ್ಕೆ ಮೂರು ಪ್ರತ್ಯೇಕ ವೇದಿಕೆಗಳಲ್ಲಿ ಗೋಷ್ಠಿಗಳಿದ್ದರೂ ಎಲ್ಲ ಕಡೆ ಸಭೆ ಬಹುತೇಕ ತುಂಬಿತ್ತು.

