ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್‌ನ ಸಬರಮತಿ ಆಶ್ರಮದಲ್ಲಿ ಜರ್ಮನಿಯ ಚಾನ್ಸೆಲರ್ ಫ್ರಿಡ್ರಿಕ್ ಮೆರ್ಜ್ ಅವರೊಂದಿಗೆ ಗಾಳಿಪಟ ಹಾರಿಸುವ ಮೂಲಕ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಿದರು.
ಸಬರಮತಿ ಆಶ್ರಮಕ್ಕೆ ಆಗಮಿಸಿದ ಬಳಿಕ, ಪ್ರಧಾನಿ ಮೋದಿ ಮತ್ತು ಚಾನ್ಸೆಲರ್ ಮೆರ್ಜ್ ರಾಷ್ಟ್ರಪಿತ ಮಹಾತ್ಮ ಗಾಂಧಿಯ ಸ್ಮಾರಕಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು. ನಂತರ ಮೆರ್ಜ್ ಅವರು ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ ತಮ್ಮ ಸಹಿ ದಾಖಲಿಸಿದರು. ಬಳಿಕ ಸಬರಮತಿ ನದಿ ತಟದಲ್ಲಿ ನಡೆದ 2026ರ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಇಬ್ಬರೂ ನಾಯಕರು ಭಾಗಿಯಾದರು. ಪ್ರಧಾನ ಮಂತ್ರಿ ಮೋದಿ “ಭಾರತ – ವಸುಧೈವ ಕುಟುಂಬಕಂ” ಎಂಬ ಸಂದೇಶವನ್ನು ಹೊಂದಿರುವ ವಿಶೇಷವಾಗಿ ವಿನ್ಯಾಸಗೊಳಿಸಲಾದ ಗಾಳಿಪಟವನ್ನು ಹಾರಿಸಿದ್ದು, ಇದು ಭಾರತದ ವಿಶ್ವ ತತ್ವಶಾಸ್ತ್ರವನ್ನು ಪ್ರತಿಬಿಂಬಿಸುವಂತಿತ್ತು.
ಜರ್ಮನ್ ಚಾನ್ಸೆಲರ್ ಫ್ರಿಡ್ರಿಕ್ ಮೆರ್ಜ್ ಅವರನ್ನು ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು. ಭಾರತ ಮತ್ತು ಜರ್ಮನಿ ನಡುವಿನ ರಾಜತಾಂತ್ರಿಕ ಸಂಬಂಧಗಳಿಗೆ 75 ವರ್ಷಗಳು ಹಾಗೂ ಕಾರ್ಯತಂತ್ರದ ಪಾಲುದಾರಿಕೆಗೆ 25 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆ ಈ ಭಾರತ ಭೇಟಿ ಮಹತ್ವ ಪಡೆದುಕೊಂಡಿದೆ.
ಈ ಭೇಟಿಯು ಎರಡೂ ದೇಶಗಳ ನಡುವಿನ ಸ್ನೇಹ, ಸಾಂಸ್ಕೃತಿಕ ಬಾಂಧವ್ಯ ಮತ್ತು ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆ ವ್ಯಕ್ತವಾಗಿದೆ.

