ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿರುವವರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಮುಂದಿನ ಒಂದೆರಡು ತಿಂಗಳಲ್ಲಿ ಪಡಿತರ ಚೀಟಿ ವಿತರಣೆ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ಪರಿಷ್ಕರಣೆ ಸೇರಿ ನಾನಾ ಕಾರಣಗಳಿಂದ ಕಳೆದ ಎರಡೂವರೆ ವರ್ಷದಿಂದ ಹೊಸ ಪಡಿತರ ಚೀಟಿ ನೀಡಲು ಸಾಧ್ಯವಾಗಿಲ್ಲ. ಸುಮಾರು 2.5ರಿಂದ 3ಲಕ್ಷ ಅರ್ಜಿ ಗಳು ಸದ್ಯ ಬಾಕಿ ಇರುವ ಮಾಹಿತಿ ಇದ್ದು, ಎಲ್ಲವೂ ಪರಿಶೀಲನೆ ಮಾಡಿ ಹೊಸ ಪಡಿತರ ಚೀಟಿ ಶೀಘ್ರ ವಿತರಣೆ ಮಾಡಲಾಗುವುದು ಎಂದು ಹೇಳಿದರು.
ವೈದ್ಯಕೀಯ ಕಾರಣಗಳಿಗೆ ಬಿಪಿಎಲ್ ಕಾರ್ಡ್ ಪಡೆಯುವವರಿಗೆ ಇಲಾಖೆಯ ಪೋರ್ಟಲ್ ಮುಕ್ತವಾಗಿರಿಸಿದಾಗ ಬೇರೆಯವರೂ ಅರ್ಜಿ ಹಾಕಿದ್ದು, ಅಂತಹ ಮೂರು ಲಕ್ಷ ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ. ಫೆಬ್ರುವರಿ ತಿಂಗಳಿಂದ ಹೊಸ ಪಡಿತರ ಚೀಟಿಗಳನ್ನು ನೀಡಲು ಅರ್ಜಿ ಆಹ್ವಾನಿಸಲಾಗುತ್ತದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ಜೊತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಬಿಪಿಎಲ್ ಕಾರ್ಡ್‌ದಾರರಿಗೆ 5 ಕೆ.ಜಿ ಅಕ್ಕಿ ನೀಡಲಾಗುತ್ತಿತ್ತು. ಅಕ್ಕಿ ಬದಲು ದಕ್ಷಿಣ ಕರ್ನಾಟಕದಲ್ಲಿ ರಾಗಿ, ಉತ್ತರ ಕರ್ನಾಟಕದಲ್ಲಿ ಜೋಳ, ತೊಗರಿ ಬೇಳೆ ನೀಡಲು ಮುಂದಾಗಿದ್ದೇವೆ ಎಂದರು.

