Tuesday, January 13, 2026
Tuesday, January 13, 2026
spot_img

ಸೋಲನ್‌ನಲ್ಲಿ ಸಿಲಿಂಡರ್ ಸ್ಫೋಟಗೊಂಡು ಮಾರುಕಟ್ಟೆ ಭಸ್ಮ: 7 ವರ್ಷದ ಮಗು ಸಾವು, 9 ಮಂದಿ ಕಣ್ಮರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಅರ್ಕಿ ಪಟ್ಟಣದಲ್ಲಿ ಅಚಾನಕ್ ಹೊತ್ತಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಮಹಾ ದುರಂತವಾಗಿ ಮಾರ್ಪಟ್ಟಿದೆ. ಕೆಳ ಅರ್ಕಿ ಮಾರುಕಟ್ಟೆ ಪ್ರದೇಶದಲ್ಲಿ ಆರಂಭವಾದ ಅಗ್ನಿ ಅವಘಡ ಸಿಲಿಂಡರ್ ಸ್ಫೋಟಗಳೊಂದಿಗೆ ಭೀಕರ ಸ್ವರೂಪ ಪಡೆದುಕೊಂಡಿದೆ.

ಈ ದುರಂತದಲ್ಲಿ ಏಳು ವರ್ಷದ ಮಗು ಮೃತಪಟ್ಟಿದ್ದು, ಅವಶೇಷಗಳ ನಡುವೆ ಮಗುವಿನ ಶವ ಪತ್ತೆಯಾಗಿದೆ. ಅಲ್ಲದೆ ಎಂಟರಿಂದ ಒಂಬತ್ತು ಮಂದಿ ಕಾಣೆಯಾಗಿದ್ದಾರೆ ಎನ್ನಲಾಗಿದ್ದು, ಅವಶೇಷಗಳಡಿ ಸಿಲುಕಿರುವ ಶಂಕೆಯ ಮೇರೆಗೆ ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಇಬ್ಬರು ಗಾಯಗೊಂಡವರನ್ನು ಅರ್ಕಿ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಮರದಿಂದ ನಿರ್ಮಿತ ಹಳೆಯ ಕಟ್ಟಡಗಳು ಮತ್ತು ಅಂಗಡಿಗಳಲ್ಲಿ ಸಂಗ್ರಹಿಸಲಾಗಿದ್ದ ಗ್ಯಾಸ್ ಸಿಲಿಂಡರ್‌ಗಳು ಒಂದರ ನಂತರ ಒಂದರಂತೆ ಸ್ಫೋಟಗೊಂಡು ಬೆಂಕಿ ವೇಗವಾಗಿ ಹರಡಲು ಕಾರಣವಾಯಿತು. ಕೆಲವೇ ಸಮಯದಲ್ಲಿ 15ಕ್ಕೂ ಹೆಚ್ಚು ಮನೆಗಳು ಮತ್ತು ವ್ಯಾಪಾರ ಅಂಗಡಿಗಳು ಸಂಪೂರ್ಣವಾಗಿ ಭಸ್ಮವಾಗಿವೆ. ಈ ಅವಘಡದಿಂದ ಮಾರುಕಟ್ಟೆ ಪ್ರದೇಶದಲ್ಲಿ ಭೀತಿ ಆವರಿಸಿದೆ.

ಸುದ್ದಿ ತಿಳಿಯುತ್ತಿದ್ದಂತೆ ಅರ್ಕಿ, ಸೋಲನ್, ಶಿಮ್ಲಾ ಸೇರಿದಂತೆ ವಿವಿಧ ಸ್ಥಳಗಳಿಂದ ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಹಲವು ಗಂಟೆಗಳ ಪರಿಶ್ರಮದ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಎಸ್‌ಡಿಆರ್‌ಎಫ್ ತಂಡಗಳನ್ನೂ ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಮೃತರ ಕುಟುಂಬಕ್ಕೆ ಸರ್ಕಾರದಿಂದ ಅಗತ್ಯ ಸಹಾಯ ನೀಡಲಾಗುತ್ತಿದ್ದು, ಘಟನೆಗೆ ಕಾರಣ ಏನೆಂಬುದರ ಕುರಿತು ತನಿಖೆಗೆ ಆದೇಶಿಸಲಾಗಿದೆ.

Most Read

error: Content is protected !!