ಹೊಸದಿಗಂತ ವರದಿ ಗದಗ:
ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಪತ್ತೆ ಹಿನ್ನೆಲೆ ಸೋಮವಾರ ಲಕ್ಕುಂಡಿ ಗ್ರಾಮಕ್ಕೆ ಹಂಪಿ ಪುರಾತತ್ವ ಇಲಾಖೆ ಅಧಿಕಾರಿಗಳು ಸೇರಿದಂತೆ ಶಾಸಕ ಸಿ.ಸಿ ಪಾಟೀಲ, ಎಸ್.ವಿ. ಸಂಕನೂರು ಹಾಗೂ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿದೆ.
ನಿಧಿ ಪತ್ತೆ ಪ್ರಕರಣ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಜತೆಗೆ ಗೊಂದಲಕ್ಕೂ ಎಡೆಮಾಡಿಕೊಟ್ಟಿದೆ. ಹೀಗಾಗಿ ರಾಜ್ಯಾದ್ಯಂತ ನಿಧಿ ಪತ್ತೆ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಲಕ್ಕುಂಡಿ ಗ್ರಾಮ ಸಪ್ತ ಗ್ರಾಮಗಳ ಅಗ್ರಹಾರವಾಗಿತ್ತು. ಸೊಕಮನಕಟ್ಟಿ, ತಂಗಾಬೆಂಚಿ, ಜವಳಬೆಂಚಿ, ನರಸಿಪುರ, ಮೊಟಬಸಪ್ಪ, ಬೂದಿಬಸಪ್ಪ, ಲಕ್ಕುಂಡಿ ಹೀಗೆ 7 ಹಳ್ಳಿಗಳನ್ನು ಅಗ್ರಹಾರವಾಗಿತ್ತು. ವಿಜಯನಗರ ಅರಸರ ಆಳಿಕ್ವೆ ಅಧಿಪತ್ಯದ ನಂತರ ಏಳು ಗ್ರಾಮಗಳ ಜನರು ಲಕ್ಕುಂಡಿಗೆ ಬಂದು ನೆಲೆಸಿದರು. ಕಲ್ಯಾಣ ಚಾಲುಕ್ಯರು, ರಾಷ್ಟ್ರಕೂಟರ, ಹೊಯ್ಸಳರು, ಕಳಚೂರಿಗಳು, ವಿಜಯನಗರ ಅರಸರು ಆಳಿದ್ದರು. ದಾನಚಿಂತಾಮಣಿ ಅತ್ತಿಮಬ್ಬೆ ಕರ್ಮಭೂಮಿ ಇದಾಗಿದ್ದು ನಾಣ್ಯಗಳನ್ನು ತಯಾರಿಸುವ ಠಂಕಸಾಲೆಗಳಿದ್ದವು ಎಂದು ಇತಿಹಾಸದ ಉಲ್ಲೇಖಗಳಿವೆ. ಹೀಗಾಗಿ ಇತಿಹಾಸಕ್ಕೆ ಸಂಬಂಧಿಸಿದ ಪುರಾತನ ಕಾಲದ ಕಲ್ಲಿನ ವಿಗ್ರಹಗಳು, ಅವಶೇಷಗಳು, ಪುರಾವೆಗಳು ಸಿಗುತ್ತವೆ. ಬೆಳ್ಳಿ, ಬಂಗಾರ, ವಜ್ರ, ವೈಡೂರ್ಯ, ಮುತ್ತು, ರತ್ನ, ಹವಳಗಳ ತುಣುಕುಗಳು ಅನೇಕ ವರ್ಷಗಳಿಂದ ಇಲ್ಲಿ ಸಿಗುತ್ತಲೇ ಇವೆ. ಈ ಎಲ್ಲ ಐತಿಹ್ಯದ ಕುರುಹು ಹಿನ್ನೆಲೆ ಶನಿವಾರದ ನಿಧಿ ಪತ್ತೆ ಪ್ರಕರಣ ಮತ್ತಷ್ಟ ಕಾವು ಪಡೆದುಕೊಂಡಿದೆ.
ಅಧಿಕಾರಿಗಳು ಭೇಟಿ:
ಹಂಪಿ ಪುರಾತತ್ವ, ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದರು.
ಹಂಪಿ ವಿಭಾಗದ ನಿರ್ದೇಶಕ ಸೈಜೇಶ್ವರ ಸ್ಥಳ ಪರಿವೀಕ್ಷಣೆ ವೇಳೆ ಮಾತನಾಡಿ 1962 ನಿಯಮ ಪ್ರಕಾರ 10 ರೂ ಮೌಲ್ಯಕ್ಕಿಂತ ಹೆಚ್ಚಿನ ಮೊತ್ತದ ವಸ್ತು ಸಿಕ್ಕರೆ ಸರ್ಕಾರಕ್ಕೆ ಸಲ್ಲುತ್ತದೆ.
ಇದು ನಿಧಿಯಾಗಿದೆ. ಭೂಮಿಯ ಒಂದು ಅಡಿ ಆಳದಲ್ಲಿ ಏನೆ ಸಿಕ್ಕರೂ ಅದು ಸರ್ಕಾರದ್ದಾಗಿದೆ. ಇನ್ನೂ ಯಾವ ಕಾಲಕ್ಕೆ ಸೇರಿದ್ದು, ಯಾರ ಆಳ್ವಿಕೆಯ ಎಂಬುದು ಬಗ್ಗೆ ಪರಿಶೀಲನೆ ನಡೆಯಬೇಕಿದೆ. ಜೊತೆಗೆ ವಶಕ್ಕೆ ಪಡೆದು ಕೊಂಡ ಆಭರಣಗಳ ಬಗ್ಗೆ ಸರ್ಕಾರಕ್ಕೆ ವರದಿ ನೀಡುತ್ತೆವೆ. ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಿ ವರದಿ ನೀಡುತ್ತೇವೆ. ಸಿಕ್ಕ ನಿಧಿಯಲ್ಲಿ 5ನೇ ಒಂದು ಭಾಗ ಕುಟುಂಬಕ್ಕೆ ಸಲ್ಲುತ್ತದೆ ಎಂದು ಅಧಿಕಾರಿ ತಿಳಿಸಿದರು.
ಸ್ಥಳೀಯ ಶಾಸಕ ಸಿ.ಸಿ. ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು. ದಾನ ಚಿಂತಾಮಣಿ ಅತ್ತಿಮಬ್ಬೆ ಹೆಸರಿಗೆ ಖ್ಯಾತಿ ಗಳಿಸಿದ್ದ ಲಕ್ಕುಂಡಿ ಗ್ರಾಮವು ಇಂದು ದೊರೆತ ಬಂಗಾರವನ್ನು ಸರ್ಕಾರಕ್ಕೆ ಒಪ್ಪಿಸಿದ ಗಂಗವ್ವ ರಿತ್ತಿ ಅವರ ಹೆಸರಿನಿಂದ ಮತ್ತೆ ಖ್ಯಾತಿ ಗಳಿಸಿದೆ. ಸರ್ಕಾರದಿಂದ ಕುಟುಂಬಕ್ಕೆ ಸಿಗಬೇಕಾದ ಸೌಕರ್ಯಗಳನ್ನು ಕೊಡಿಸಲು ಸರ್ಕಾರದ ಜತೆ ಮಾತುಕತೆ ನಡೆಸಿ ಕೊಡಿಸಲಾಗುವುದು. ಅವರು ಮನೆ ಕಟ್ಟಲು ಅನುಕೂಲ ಮಾಡಿಕೊಂಡುವಂತೆ ಜಿಲ್ಲಾಡಳಿತಕ್ಕೆ ಮತ್ತು ಪುರಾತತ್ವ ಇಲಾಖೆಗೆ ಸೂಚಿಸಲಾಗುವುದು ಎಂದರು.



