Monday, January 12, 2026
Monday, January 12, 2026
spot_img

ನಟ ಯಶ್ ʻಟಾಕ್ಸಿಕ್ʼ ಚಿತ್ರದ ಟೀಸರ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಯಶ್ ಅಭಿನಯದ ʻಟಾಕ್ಸಿಕ್ʼ ಚಿತ್ರದ ಟೀಸರ್ ವಿರುದ್ಧ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಇಂದು ಆಮ್ ಆದ್ಮಿ ಪಕ್ಷದ ಮಹಿಳಾ ಘಟಕ ದೂರು ನೀಡಿದೆ.

ಕನ್ನಡ ಸಾಂಸ್ಕೃತಿಕ ಜಗತ್ತಿಗೆ ಅಪಮಾನವಾಗುತ್ತಿರುವ ಕಾರಣ, ಟಾಕ್ಸಿಕ್‌ ಟೀಸರ್ ಅನ್ನು ರದ್ದು ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಟಾಕ್ಸಿಕ್ ಟೀಸರ್ ನಲ್ಲಿರುವ ಅಶ್ಲೀಲ ದೃಶ್ಯಗಳನ್ನ ತೆಗೆದುಹಾಕುವಂತೆ ಜೊತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಇರದ ಕಾರಣ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ರೂಪ ಆರ್ ಅವರಿಗೆ ದೂರನ್ನು ನೀಡಲಾಗಿದೆ.

ಆಮ್ ಆದ್ಮಿ ಪಕ್ಷದ ಮಹಿಳಾ ಘಟಕದ ಕಾರ್ಯದರ್ಶಿ ಉಷಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಯಶ್ ಅವರು ಒಂದು ಸಂದರ್ಶನದಲ್ಲಿ ಹೇಳುತ್ತಾರೆ, ನಾನು ಮಾಡುವ ಸಿನಿಮಾಗಳನ್ನು ಇಡೀ ಫ್ಯಾಮಿಲಿ ಒಟ್ಟಿಗೆ ನೋಡಬೇಕು. ಅಂತ ಕಂಫರ್ಟ್ ಇರ್ಬೇಕು ಅಂತಾರೆ. ಇದೇನಾ ಅದು? ಎಲ್ಲಿ ಇದೆ ಕಂಫರ್ಟ್? ಟೀಸರ್‌ನಲ್ಲಿರೋ ದೃಶ್ಯಗಳನ್ನ ತೆಗೆದು ಹಾಕಬೇಕು. ಕನ್ನಡ ಸಿನಿಮಾವನ್ನು ಹಾಲಿವುಡ್ ರೇಂಜ್‌ಗೆ ತೆಗೆದುಕೊಂಡು ಹೋಗಬೇಕು ಎಂದರೆ, ನಮ್ಮ ಸಂಸ್ಕೃತಿ ಇರುವ ಸಿನಿಮಾಗಳನ್ನು ಮಾಡಲಿ. ಅದು ಬಿಟ್ಟು ಈ ರೀತಿಯ ಸಿನಿಮಾಗಳು ಅಲ್ಲ ಎಂದು ಖಡಕ್‌ ಎಚ್ಚರಿಕೆ ನೀಡಿದ್ದಾರೆ.‌

ದೂರಿನಲ್ಲಿ ಏನಿದೆ?
ಚಿತ್ರದ ಟೀಸರ್‌ನಲ್ಲಿರುವ ಅಶ್ಲೀಲ ಮತ್ತು ಪ್ರೌಢ ದೃಶ್ಯಗಳು ಹೆಂಗಳೆಯರ ಹಾಗೂ ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಅತ್ಯಂತ ಧಕ್ಕೆ ಉಂಟು ಮಾಡುತ್ತಿವೆ. ಯಾವುದೇ ವಯಸ್ಸಿನ ಮಿತಿ ಅಥವಾ ಮುನ್ನೆಚ್ಚರಿಕೆ ಇಲ್ಲದೆ ಸಾರ್ವಜನಿಕವಾಗಿ ಬಿಡುಗಡೆಯಾಗಿರುವ ಈ ದೃಶ್ಯಗಳು ಮಹಿಳೆಯರ ಘನತೆಗೆ ಕುಂದು ತರುವಂತಿದ್ದು ಕನ್ನಡದ ಸಾಂಸ್ಕೃತಿಕ ಜಗತ್ತಿಗೆ ಮಾಡುತ್ತಿರುವ ಅವಮಾನವಾಗಿದೆ. ಸಮಾಜದ ಮೇಲೆ, ವಿಶೇಷವಾಗಿ ಅಪ್ರಾಪ್ತ ವಯಸ್ಕರ ಮೇಲೆ ಇದು ಬೀರುತ್ತಿರುವ ದುಷ್ಪರಿಣಾಮಗಳನ್ನು ಗಮನಿಸಿ, ರಾಜ್ಯ ಮಹಿಳಾ ಆಯೋಗವು ಈ ಕೂಡಲೇ ಮಧ್ಯಪ್ರವೇಶಿಸಬೇಕು.

ಈ ಟೀಸ‌ರ್ ಅನ್ನು ತಕ್ಷಣವೇ ರದ್ದುಗೊಳಿಸಲು ಮತ್ತು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ನಾವು ವಿನಂತಿಸುತ್ತೇವೆ. ನಮ್ಮ ನಾಡಿನ ಸಾಂಸ್ಕೃತಿಕ ಮತ್ತು ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಮಹಿಳಾ ಆಯೋಗವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಆಮ್ ಆದ್ಮ ಪಕ್ಷದ ಮಹಿಳಾ ಘಟಕದ ಪರವಾಗಿ ನಾವು ಒತ್ತಾಯಿಸುತ್ತೇವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!