ಹೊಸದಿಗಂತ ಕಲಬುರಗಿ
ಕಲ್ಯಾಣ ಕರ್ನಾಟಕ ಭಾಗದ ಸರ್ವತೋಮುಖ ಏಳಿಗೆಗಾಗಿ ರಾಜ್ಯ ಸರ್ಕಾರ ಬದ್ಧವಾಗಿದ್ದು, ಸುಮಾರು 905.87 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಚಾಲನೆ ನೀಡಿದರು.
ಯಡ್ರಾಮಿಯ ಕೆಪಿಎಸ್ ಶಾಲಾ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ (KKRDB) ಹಮ್ಮಿಕೊಂಡಿದ್ದ ಬೃಹತ್ ಸಮಾರಂಭದಲ್ಲಿ ಅವರು ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿದರು.
ರಾಜ್ಯದ ಹೊಸ ತಾಲ್ಲೂಕುಗಳಲ್ಲಿ ಆಡಳಿತ ಸುಗಮಗೊಳಿಸಲು 163.55 ಕೋಟಿ ರೂ. ವೆಚ್ಚದಲ್ಲಿ 17 ಹೊಸ ಪ್ರಜಾಸೌಧ ಹಾಗೂ ನಾಡಕಚೇರಿಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ.
ಗುಣಮಟ್ಟದ ಶಿಕ್ಷಣಕ್ಕಾಗಿ ಕಲ್ಯಾಣ ಕರ್ನಾಟಕದಾದ್ಯಂತ 300 ಹೊಸ ಕೆಪಿಎಸ್ (KPS) ಶಾಲೆಗಳನ್ನು ಸ್ಥಾಪಿಸಲು 600 ರಿಂದ 900 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.
ನಂಜುಂಡಪ್ಪ ವರದಿಯ ಆಧಾರದ ಮೇಲೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಇದರ ಪ್ರಗತಿ ಪರಿಶೀಲನೆಗೆ ರಚಿಸಲಾಗಿರುವ ಗೋವಿಂದ ರಾವ್ ಸಮಿತಿಯ ಶಿಫಾರಸುಗಳನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಸಿಎಂ ಭರವಸೆ ನೀಡಿದರು.
“2013-18ರ ಅವಧಿಯಲ್ಲೇ ನಾವು ನೀಡಿದ ಭರವಸೆಗಳನ್ನು ಈಡೇರಿಸಿದ್ದೇವೆ. ಈಗಿನ ಅವಧಿಯಲ್ಲೂ ಪಂಚ ಗ್ಯಾರಂಟಿಗಳ ಜೊತೆಗೆ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ” ಎಂದು ಸಿದ್ದರಾಮಯ್ಯ ನುಡಿದರು.
2018-23ರ ಅವಧಿಯಲ್ಲಿ ಹಿಂದಿನ ಸರ್ಕಾರವು ಹೊಸ ತಾಲ್ಲೂಕುಗಳಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ವಿಫಲವಾಗಿತ್ತು. ಆದರೆ ನಮ್ಮ ಸರ್ಕಾರ ಬಂದ ಮೇಲೆ 49 ಹೊಸ ತಾಲ್ಲೂಕುಗಳ ಪ್ರಜಾಸೌಧಗಳಿಗೆ ಚಾಲನೆ ನೀಡಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.


