ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಕಣ್ಣೂರು ಜಿಲ್ಲೆಯ ಮಟ್ಟೂಲ್‌ನ ನಿವಾಸಿ ಕೆ.ವಿ.ಪ್ರಣವ್ ೨೩ವರ್ಷದ ತರುಣ. ಚೆಂಡೆ ಕಲಾವಿದನಾದ ಈತನ ಶಿಂಕರಿಮೇಳಂ ತಂಡ ಗುಜರಾತಿನ ಶ್ರೀ ಸೋಮನಾಥ ದೇವಾಲಯದ ಶ್ರೀಸೋಮನಾಥ ಸ್ವಾಭಿಮಾನ ಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು. ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಈ ಕಾರ್ಯಕ್ರಮದಲ್ಲೂ ಒಂದು ಕಾರ್ಯಕ್ರಮವಾಗಿ ಪ್ರಣವ್ ತಂಡ ಪಾಲ್ಗೊಂಡಿತ್ತು. ಆದರೆ ಇದ್ದಕ್ಕಿದ್ದಂತೆ ಪ್ರಣವ್‌ಗೆ ಜೀವನದಲ್ಲೆಂದೂ ಊಹಿಸದಿದ್ದ ಅವಿಸ್ಮರಣೀಯ ಕ್ಷಣ ಎದುರಾಯಿತು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಚೆಂಡೆ ಬಾರಿಸುತ್ತಿದ್ದ ಪ್ರಣವ್ ಬಳಿಗೆ ನಡೆದುಬಂದು ನಗುತ್ತಾ ಆತನಿಂದ ಚೆಂಡೆ ಕೋಲು ಪಡೆದು ೨೦ ಸೆಕೆಂಡ್‌ಗಳ ಕಾಲ ತಂಡಕ್ಕೆ ಸಾಥ್ ನೀಡಿ ಚೆಂಡೆಬಾರಿಸಿದರು. ಅಲ್ಲಿದ್ದವರಿಗೆಲ್ಲ ಅದೊಂದು ಅಪೂರ್ವ ಸಂಭ್ರಮದ ಕ್ಷಣವಾಗಿತ್ತು!
ಕಲಾವಿದರನ್ನು ಅಭಿನಂದಿಸುತ್ತಾ ಬರುತ್ತಿದ್ದ ಪ್ರಧಾನಿ ಮೋದಿಯವರಿಗೆ ಭದ್ರತಾ ಸಿಬ್ಬಂದಿ ಬಿಗಿ ಭದ್ರತೆ ಒದಗಿಸಿದ್ದರು. ಹಿಂಬದಿಯಿಂದ ಸೇರಿದ್ದ ಭಾರೀ ಜನಸ್ತೋಮ ಜಯಘೋಷ ಮೊಳಗಿಸುತ್ತಿತ್ತು. ಆದರೆ ಮೋದಿಯವರು ಸಹಕಲಾವಿದರಿಗೆ ಅಭಿನಂದನೆ ಸಲ್ಲಿಸುತ್ತಾ ನಡೆಯುತ್ತಾ ಬಂದು ಪ್ರಣವ್ ಬಳಿಗೆ ಬರುತ್ತಾರೆ. ಆತನ ಕೈಗಳಿಂದ ಚೆಂಡೆಕೋಲುಗಳನ್ನು ಪಡೆದು ಕಲಾವಿದರ ತಾಳಕ್ಕೆ ತಕ್ಕಂತೆ ತಾವೂ ಚೆಂಡೆ ಬಾರಿಸುತ್ತಾರೆ .ಈ ಕ್ಷಣಕ್ಕೆ ಪ್ರಣವ್ ಅಚ್ಚರಿ, ಆನಂದಗಳಿಂದ ಸ್ತಬ್ಧನಾಗಿಬಿಟ್ಟಿದ್ದ. ಪ್ರಧಾನಿಯವರು ಉತ್ಸಾಹದಿಂದ ನಗುತ್ತಾ ಚೆಂಡೆ ಬಾರಿಸಿ ಅಲ್ಲಿದ್ದ ಕಲಾವಿದರಿಗೆ ಸೂರ್ತಿ ತುಂಬುತ್ತಿದ್ದರು.
ಈ ಸಮಾರಂಭಕ್ಕೆ ಪ್ರಧಾನಿಯವರು ಬರುತ್ತಾರೆಂಬುದು ನಮಗೆ ತಿಳಿದಿರಲಿಲ್ಲ. ನಮಗೆ ಇತರ ಕಾರ್ಯಕ್ರಮಗಳಂತೆ ಇದೂ ಒಂದು ಕಾರ್ಯಕ್ರಮವಾಗಿತ್ತಷ್ಟೇ.ಆದರೆ ೩೦ನಿಮಿಷಗಳಿಗೂ ಕಡಿಮೆ ಅವಯಲ್ಲಿ ಎಲ್ಲ ಘಟನೆಗಳೂ ನಡೆದುಹೋದವು ಎಂದು ಪ್ರಣವ್ ಸಂತಸವನ್ನು ಹಂಚಿಕೊಳ್ಳುತ್ತಾನೆ.
ಪ್ರಣವ್ ಮಟ್ಟೂಲ್‌ನ ಸಿಪಿಎಂನ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಪಿ.ಪ್ರದೀಪನ್ ಅವರ ಪುತ್ರ. ಪ್ರಣವ್ ಚೆಂಡೆಯನ್ನು ಬಾರಿಸುತ್ತಿರುವ ವಿಡಿಯೋವೊಂದನ್ನು ಮೋದಿಯವರು ಬಳಿಕ ತಮ್ಮ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದು, ಅನಂತರ ಬಿಜೆಪಿಯ ಅಕೃತ ರಾಷ್ಟ್ರೀಯ ಸಾಮಾಜಿಕ ಜಾಲತಾಣದಲ್ಲೂ ಕಂಡುಬಂದು , ಸಾವಿರಾರು ಮಂದಿ ವೀಕ್ಷಿಸಿ ದೇಶದೆಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂತು.
ಪ್ರಣವ್ ಕಳೆದ ೧೦ವರ್ಷಗಳಲ್ಲಿ ತಾಳವಾದ್ಯ ಕಲಿಯುತ್ತಿದ್ದಾನೆ.ಜ.೧೧ರಂದು ಸೋಮನಾಥ ದೇಗುಲದ ಕಾರ್ಯಕ್ರಮಕ್ಕಾಗಿ ಕಾಸರಗೋಡಿನ ಚೆರ್ವತ್ತೂರಿನಿಂದ ಶಿಂಕರಿಮೇಳ ತಂಡದ ಭಾಗವಾಗಿ ಪ್ರಣವ್ ಗುಜರಾತಿನ ಗೀರ್‌ಗೆ ಪ್ರಯಾಣಿಸಿದೆ.ಕೋಯಿಕ್ಕೋಡ್ ಮೂಲದ ಏಜೆನ್ಸಿಯ ಮೂಲಕ ಈ ತಂಡ ಗುಜರಾತಿಗೆ ತೆರಳಿತ್ತು.೧೬ಸದಸ್ಯರ ತಂಡದಲ್ಲಿ ಐವರು ಪುರುಷರು ಮತ್ತು ೧೧ಮಂದಿ ಮಹಿಳೆಯರಿದ್ದು, ಪ್ರಣವ್ ಮತ್ತು ಆತನ ಗೆಳೆಯ ಅರುಣ್ ಅವರನ್ನು ಹೊರತುಪಡಿಸಿ ಉಳಿದವರೆಲ್ಲ ಕಾಸರಗೋಡು ಜಿಲ್ಲೆಯವರು.ತ್ರಿಶೂರಿನ ಪುಲಿಕಲಿ ಮತ್ತು ಕಾವಡಿ ತಂಡಗಳೂ ಕೇರಳದ ತಂಡದಲ್ಲಿ ಒಳಗೊಂಡಿದ್ದವು .
ಈ ಕಾರ್ಯಕ್ರಮವನ್ನು ಶ್ರೀಸೋಮನಾಥ ದೇವಾಲಯದ ಸಂರಕ್ಷಣೆಯ ಹೋರಾಟದಲ್ಲಿ ಬಲಿದಾನಗೈದವರ ಗೌರವಾರ್ಥ ಆಯೋಜಿಸಲಾಗಿದ್ದ ‘ಶೌರ್ಯ ಯಾತ್ರಾ’ದ ಭಾಗವಾಗಿ ಆಯೋಜಿಸಲಾಗಿತ್ತು. ಜ.೧೦ರಂದು ಗುಜರಾತಿಗೆ ತಲುಪಿದ್ದ ತಂಡ ಬೆಳಗಿನವರೆಗೂ ಕಾರ್ಯಕ್ರಮ ನೀಡಿದೆ.ಆದರೆ ಪ್ರಧಾನಿಯವರು ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ ಎಂಬುದು ನಮಗೆ ಗೊತ್ತಿರಲಿಲ್ಲ. ಆಯೋಜಕರು ಇಂತಹ ಸಾಧ್ಯತೆಯೊಂದು ಇದೆ ಎಂದು ಸುಳಿವು ನೀಡಿದ್ದಾರಾದರೂ ನಾವು ನಿರೀಕ್ಷಿಸಿರಲಿಲ್ಲ . ವಿಶೇಷ ಎಂದರೆ ಕೇರಳ ತಂಡಗಳ ಪೈಕಿ ನಮ್ಮ ತಂಡಕ್ಕೆ ಮಾತ್ರ ಒಳಗೆ ಪ್ರವೇಶವಿತ್ತು. ಇತರ ತಂಡಗಳು ಹೊರಗೆ ಕಾರ್ಯಕ್ರಮ ನೀಡಿದ್ದವು ಎಂದು ಪ್ರಣವ್ ತಿಳಿಸಿದ್ದಾನೆ.
ಪ್ರಧಾನಿ ಮೋದಿಯವರು ದೇವಾಲಯದೊಳಗೆ ಪೂಜಾವಿಗಳನ್ನು ನೆರವೇರಿಸಿ ಸೇರಿದ್ದ ಜನತೆಯತ್ತ ಕೈಬೀಸಿ ಶುಭಾಶಯ ಕೋರಿದರು. ಮೊದಲಿಗೆ ಕಾವಡಿ ನಿರ್ವಹಣಾಕಾರರನ್ನು ಅಭಿನಂದಿಸಿ ಸಾಲಲ್ಲಿದ್ದ ಕಲಾವಿದರನ್ನು ಅಭಿನಂದಿಸುತ್ತಾ ಇದ್ದಕ್ಕಿದ್ದಂತೆ ನೇರ ನನ್ನ ಬಳಿಗೆ ಆಗಮಿಸಿದರು.ನಾನು ಅನುಭವದ ಹಿನ್ನೆಲೆಯಲ್ಲಿ ಅತ್ಯುತ್ಸಾಹದಲ್ಲಿ ಚೆಂಡೆ ಬಾರಿಸುತ್ತಿದ್ದೆ. ಮೋದಿಯವರು ನನ್ನ ಬಳಿ ಬಂದವರೇ ಹಿಂದಿಯಲ್ಲಿ ನನ್ನ ಬಳಿ ಮಾತನಾಡಿದರು.
ಜನರ ಜಯಘೋಷ ಮತ್ತು ವಾದ್ಯಗಳ ಸದ್ದಿನ ಜೊತೆ ನನಗೆ ಹಿಂದಿ ಸರಿಯಾಗಿ ಬಾರದ್ದರಿಂದ ಅವರು ಏನು ಹೇಳಿದರೆಂಬುದು ಗೊತ್ತಾಗಲಿಲ್ಲ.ಅಚ್ಚರಿ, ವಿಸ್ಮಯದಿಂದ ನಾನು ಕೇವಲ ನಗುವನ್ನು ಮಾತ್ರ ವ್ಯಕ್ತಪಡಿಸಿದೆ.ನನ್ನ ಬದುಕಿನಲ್ಲಿ ಮೊದಲ ಬಾರಿಗೆ ಇಂತಹ ಒಬ್ಬ ಪ್ರಮುಖ ರಾಷ್ಟ್ರ ನಾಯಕನನ್ನು ಇಷ್ಟು ಹತ್ತಿರದಿಂದ ನೋಡಿದೆ ಎನ್ನುತ್ತಾನೆ ಐಟಿಐ ಪದವೀಧರನಾದ ಪ್ರಣವ್ .ನನ್ನಂತೆಯೇ ತಂಡದ ಪ್ರತಿಯೊಬ್ಬರೂ ಅತೀವ ಅಚ್ಚರಿ, ಸಂತಸ ಅನುಭವಿಸುತ್ತಿದ್ದಾರೆ.ಪ್ರಣವ್ ತಾಯಿ ಖಾಸಗಿ ಬ್ಯಾಂಕೊಂದರಲ್ಲಿ ಉದ್ಯೋಗಿಯಾಗಿದ್ದು, ಸಹೋದರಿ ಸ್ವಾತಿ ಬ್ಯಾಂಕಿಂಗ್ ಪರೀಕ್ಷೆಗೆ ಸಜ್ಜಾಗುತ್ತಿದ್ದಾಳೆ.


