ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್‌ನಲ್ಲಿ ಕಳೆದ ಕೆಲವು ದಿನಗಳಿಂದ ಮುಂದುವರಿದಿರುವ ‘ಅಧಿಕಾರ ಹಂಚಿಕೆ’ ಮತ್ತು ‘ಕುರ್ಚಿ ಕಾಳಗ’ದ ನಡುವೆಯೇ, ಇಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯಲಿರುವ ಒಂದು ಭೇಟಿ ಇಡೀ ರಾಜ್ಯದ ಗಮನ ಸೆಳೆದಿದೆ. ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಂದು ಮೈಸೂರಿಗೆ ಆಗಮಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಲಿದ್ದಾರೆ.
ವಯನಾಡಿಗೆ ತೆರಳುವ ಉದ್ದೇಶದಿಂದ ರಾಹುಲ್ ಗಾಂಧಿ ಅವರು ಇಂದು ಮಧ್ಯಾಹ್ನ 2:20ಕ್ಕೆ ವಿಶೇಷ ವಿಮಾನದ ಮೂಲಕ ಮೈಸೂರು ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಕೂಡ ಮಧ್ಯಾಹ್ನ 1:30ಕ್ಕೇ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ರಾಹುಲ್ ಗಾಂಧಿ ಅವರೊಂದಿಗೆ ‘ಲಂಚ್ ಮೀಟಿಂಗ್’ ನಡೆಸಲಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ಮತ್ತು ಸಂಪುಟ ಪುನಾರಚನೆಯ ಬಗ್ಗೆ ಪರ-ವಿರೋಧ ಚರ್ಚೆಗಳು ತಾರಕಕ್ಕೇರಿರುವ ಈ ಸಂದರ್ಭದಲ್ಲಿ ಈ ಭೇಟಿ ಮಹತ್ವ ಪಡೆದಿದೆ.
ಸಾಮಾನ್ಯವಾಗಿ ವರಿಷ್ಠರು ಬಂದಾಗ ಸ್ವಾಗತಿಸುವುದು ಶಿಷ್ಟಾಚಾರವಾದರೂ, ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಈ ‘ಲಂಚ್ ಮೀಟಿಂಗ್’ ಕೇವಲ ಸೌಜನ್ಯದ ಭೇಟಿಯಾಗಿ ಉಳಿದಿಲ್ಲ. ರಾಹುಲ್ ಗಾಂಧಿ ಅವರು ಈ ಇಬ್ಬರೂ ಪ್ರಭಾವಿ ನಾಯಕರಿಗೆ ಯಾವ ರೀತಿಯ ಕಿವಿಮಾತು ಹೇಳಲಿದ್ದಾರೆ ಅಥವಾ ಕುರ್ಚಿ ಕಾಳಗಕ್ಕೆ ತಾತ್ಕಾಲಿಕ ವಿರಾಮ ಹಾಡಲಿದ್ದಾರೆಯೇ ಎಂಬುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.


