ಹೊಸದಿಗಂತ ಡಿಜಿಟಲ್ ಡೆಸ್ಕ್:
ತಡರಾತ್ರಿ ರಸ್ತೆಗಳು ಖಾಲಿಯಾಗಿದ್ದ ಸಮಯದಲ್ಲಿ ನಡೆದ ಒಂದು ಸಣ್ಣ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮೆಚ್ಚುಗೆಗೆ ಪಾತ್ರವಾಗಿದೆ. ರಾಪಿಡೊ ಮಹಿಳಾ ಚಾಲಕಿಯೊಬ್ಬರು ದಾರಿ ತಪ್ಪಿ ಭಯಭೀತಳಾಗಿದ್ದ ವಿದೇಶಿ ಮಹಿಳೆಯನ್ನು ಸುರಕ್ಷಿತವಾಗಿ ಹೋಟೆಲ್‌ವರೆಗೆ ಕರೆದುಕೊಂಡು ಹೋಗಿರುವ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ.
ಈ ಘಟನೆ ರಾತ್ರಿ ಸುಮಾರು 10 ಗಂಟೆ ವೇಳೆ ನಡೆದಿದ್ದು, ಗೂಗಲ್ ಮ್ಯಾಪ್ಸ್ ವಿಫಲವಾದ ಕಾರಣ ವಿದೇಶಿ ಮಹಿಳೆ ಬೀಚ್ ಬಳಿ ದಾರಿ ತಪ್ಪಿದ್ದಾಳೆ ಎನ್ನಲಾಗಿದೆ. ಒಂಟಿಯಾಗಿದ್ದ ಆಕೆ ಭಯದಿಂದ ನಡುಗುತ್ತಿದ್ದ ವೇಳೆ, ರಾಪಿಡೊ ಚಾಲಕಿ ಸಿಂಧು ಕುಮಾರಿ ಅವರನ್ನು ಗಮನಿಸಿ ನಿಲ್ಲಿಸಿ ಸಹಾಯ ಮಾಡಿದ್ದಾರೆ. ಆಕೆಗೆ ಧೈರ್ಯ ತುಂಬಿದ ಸಿಂಧು, ಹೋಟೆಲ್ ಕೊಕೊನಟ್‌ವರೆಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗಿದ್ದಾರೆ.
ವಿಡಿಯೋದಲ್ಲಿ, ಹೋಟೆಲ್ ತಲುಪಿದ ನಂತರ ವಿದೇಶಿ ಮಹಿಳೆ ಸಿಂಧು ಕುಮಾರಿಯನ್ನು ಅಪ್ಪಿಕೊಂಡು ಕೃತಜ್ಞತೆ ವ್ಯಕ್ತಪಡಿಸುವ ದೃಶ್ಯಗಳು ಮನಮಿಡಿಯುವಂತಿವೆ. ಸಿಂಧು ತಮ್ಮ ಮಾತಿನಲ್ಲಿ, ಮಹಿಳೆ ಹೇಗೆ ದಾರಿ ತಪ್ಪಿದ್ದರು ಮತ್ತು ತಾವು ಏಕೆ ಸಹಾಯ ಮಾಡಲು ತೀರ್ಮಾನಿಸಿದರು ಎಂಬುದನ್ನು ವಿವರಿಸಿದ್ದಾರೆ.
ಈ ಕ್ಲಿಪ್ ಅನ್ನು Xನಲ್ಲಿ @RealBababanaras ಎಂಬ ಖಾತೆ ಹಂಚಿಕೊಂಡಿದ್ದು, ಲಕ್ಷಾಂತರ ವೀಕ್ಷಣೆಗಳು ಮತ್ತು ಮೆಚ್ಚುಗೆ ಗಳಿಸಿದೆ. “ಇದು ನಿಜವಾದ ಭಾರತ”, “ಇನ್ನಷ್ಟು ಮಹಿಳಾ ಚಾಲಕಿಯರು ಬೇಕು” ಎಂಬ ಅಭಿಪ್ರಾಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಹಲವರು ರಾಪಿಡೊ ಕಂಪನಿಯನ್ನು ಟ್ಯಾಗ್ ಮಾಡಿ, ಸಿಂಧು ಕುಮಾರಿಯ ಮಾನವೀಯತೆ ಮತ್ತು ಧೈರ್ಯವನ್ನು ಅಧಿಕೃತವಾಗಿ ಗೌರವಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಘಟನೆ ಮಹಿಳಾ ಸಬಲೀಕರಣ ಮತ್ತು ಮಾನವೀಯತೆಯ ಶಕ್ತಿಯನ್ನು ಮತ್ತೆ ನೆನಪಿಸುವಂತಾಗಿದೆ.


