ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಭಾಷೆಯ ವಿಚಾರವಾಗಿ ಪರ-ವಿರೋಧದ ಚರ್ಚೆಗಳು, ಜಗಳಗಳು ನಡೆಯುತ್ತಿರುವುದು ಸಾಮಾನ್ಯವಾಗಿದೆ. ಅದರಲ್ಲೂ ಹಿಂದಿ ಭಾಷಿಕರ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಸ್ಥಳೀಯರಲ್ಲಿ ಅಸಮಾಧಾನವಿದೆ. ಇಂತಹ ವಾತಾವರಣದ ನಡುವೆ, ಜಪಾನ್ ಮೂಲದ ಯುವತಿಯೊಬ್ಬಳು ಅಚ್ಚಗನ್ನಡದಲ್ಲಿ ಮಾತನಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಜಪಾನ್‌ನ ಇನ್‌ಫ್ಲುಯೆನ್ಸರ್ ಆಗಿರುವ ಮೇಯೋ, ಬೆಂಗಳೂರಿನಲ್ಲಿ ನಡೆದ ‘ಒಟಾ ಟೋಕಿಯೋ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮೂಲತಃ ಹಿಂದಿ ಭಾಷೆಯನ್ನು ಚೆನ್ನಾಗಿ ಬಲ್ಲ ಅವರು, ವೇದಿಕೆಯ ಮೇಲೆ ಹಿಂದಿಯಲ್ಲಿ ಮಾತನಾಡುತ್ತಲೇ ಕನ್ನಡದಲ್ಲಿ ಸಂವಹನ ನಡೆಸಲು ಪ್ರಯತ್ನಿಸಿದರು. ಈ ವಿಡಿಯೋವನ್ನು ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, “ಹಿಂದಿ ಮಾತನಾಡುವ ಜಪಾನ್ ಹುಡುಗಿ ಬೆಂಗಳೂರಿನಲ್ಲಿ ಕನ್ನಡ ಮಾತನಾಡಲು ಪ್ರಯತ್ನಿಸಿದ್ದಾಳೆ” ಎಂದು ಶೀರ್ಷಿಕೆ ನೀಡಿದ್ದಾರೆ.
ವೇದಿಕೆಯ ಮೇಲೆ ಮೈಕ್ ಹಿಡಿದ ಮೇಯೋ, ಸಭಿಕರನ್ನು ನೋಡಿ “ಚೆನ್ನಾಗಿದ್ದೀರಾ?” ಎಂದು ವಿಚಾರಿಸಿದರು. ನಂತರ “ಇಲ್ಲಿ ಒಳ್ಳೆಯ ಅಡುಗೆ ಯಾವುದು?” ಎಂದು ಕುತೂಹಲದಿಂದ ಕೇಳಿದರು. ಸಭಿಕರು ಏಕಕಂಠದಿಂದ “ಮಸಾಲೆ ದೋಸೆ” ಎಂದು ಕೂಗಿದಾಗ, ಅವರು ಕೂಡ ಅಷ್ಟೇ ಸಂಭ್ರಮದಿಂದ “ಮಸಾಲೆ ದೋಸೆ” ಎಂದು ಮರುಚ್ಚರಿಸಿದರು. ಬಳಿಕ ಕನ್ನಡದಲ್ಲಿ ವಂದನೆ ಸಲ್ಲಿಸುವುದು ಹೇಗೆ ಎಂದು ಕೇಳಿ ತಿಳಿದು, “ಧನ್ಯವಾದ” ಎಂದು ಹೇಳುವ ಮೂಲಕ ಸಭಿಕರ ಚಪ್ಪಾಳೆ ಗಿಟ್ಟಿಸಿಕೊಂಡರು.
ತಮ್ಮ ಭಾಷಾ ಪ್ರೇಮದ ಬಗ್ಗೆ ಬರೆದುಕೊಂಡಿರುವ ಮೇಯೋ, “ನನ್ನ ಕನ್ನಡ ಇನ್ನೂ ಸುಧಾರಿಸಬೇಕಿದೆ ಎಂದು ನನಗೆ ತಿಳಿದಿದೆ. ಆದರೆ ನಾನು ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸಿದ್ದನ್ನು ನೋಡಿ ಬೆಂಗಳೂರಿಗರಿಗೆ ತುಂಬಾ ಖುಷಿಯಾಗಿದೆ ಎಂಬುದು ನನಗೆ ಗೊತ್ತು” ಎಂದು ಸಂತಸ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ದೋಸೆಯ ರುಚಿಗೆ ಮಾರುಹೋಗಿರುವ ಈ ವಿದೇಶಿ ಯುವತಿಯ ಕನ್ನಡದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಪಡೆಯುತ್ತಿದ್ದು, “ಕನ್ನಡ ಕಲಿಯುವ ಮನಸ್ಸಿದ್ದರೆ ಭಾಷೆ ತಾನಾಗಿಯೇ ಒಲಿಯುತ್ತದೆ” ಎಂಬುದಕ್ಕೆ ಈಕೆ ಸಾಕ್ಷಿಯಾಗಿದ್ದಾರೆ.


