ಆಂಧ್ರ ಮತ್ತು ತೆಲಂಗಾಣ ಅಡುಗೆಯಲ್ಲಿ ವಿಶೇಷ ಸ್ಥಾನ ಪಡೆದಿರುವ ಗೊಂಗುರ ಎಲೆಗಳಿಂದ ಮಾಡುವ ಗೊಂಗುರ ಚಟ್ನಿ ರುಚಿಗೂ ಆರೋಗ್ಯಕ್ಕೂ ಸೂಪರ್. ಸ್ವಲ್ಪ ಹುಳಿ, ಸ್ವಲ್ಪ ಖಾರದ ರುಚಿಯ ಮಿಶ್ರಣ ಈ ಚಟ್ನಿಯ ವಿಶೇಷತೆ. ಬಿಸಿ ಬಿಸಿ ಅನ್ನ, ತುಪ್ಪ ಅಥವಾ ಎಣ್ಣೆಯ ಜೊತೆ ಇದನ್ನು ಹಾಕಿ ತಿಂದ್ರೆ ಬೇರೇನೂ ಬೇಡ.
ಬೇಕಾಗುವ ಪದಾರ್ಥಗಳು
ಗೊಂಗುರ ಎಲೆಗಳು – 2 ಕಪ್ (ತೊಳೆದು ಕತ್ತರಿಸಿದವು)
ಒಣ ಕೆಂಪು ಮೆಣಸು – 6 ರಿಂದ 8
ಬೆಳ್ಳುಳ್ಳಿ – 5–6 ಕಳಿ
ಈರುಳ್ಳಿ – 1 ಸಣ್ಣದು (ಐಚ್ಛಿಕ)
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಟೇಬಲ್ ಸ್ಪೂನ್
ಸಾಸಿವೆ – 1 ಟೀ ಸ್ಪೂನ್
ಜೀರಿಗೆ – 1 ಟೀ ಸ್ಪೂನ್
ಮೆಂತ್ಯ – ½ ಟೀ ಸ್ಪೂನ್
ತಯಾರಿಸುವ ವಿಧಾನ
ಮೊದಲು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಒಣ ಕೆಂಪು ಮೆಣಸು, ಜೀರಿಗೆ ಮತ್ತು ಮೆಂತ್ಯವನ್ನು ಸಣ್ಣ ಉರಿಯಲ್ಲಿ ಹುರಿಯಿರಿ. ಮೆಣಸು ಫ್ರೈ ಆದ ಕೂಡಲೇ ಬೇರೆ ಪಾತ್ರೆಗೆ ತೆಗೆದು ಇಡಿ. ಅದೇ ಬಾಣಲೆಯಲ್ಲಿ ಇನ್ನಷ್ಟು ಎಣ್ಣೆ ಹಾಕಿ ಬೆಳ್ಳುಳ್ಳಿ ಹಾಗೂ ಈರುಳ್ಳಿಯನ್ನು ಸ್ವಲ್ಪ ಹುರಿಯಿರಿ. ಈಗ ಕತ್ತರಿಸಿದ ಗೊಂಗುರ ಎಲೆಗಳನ್ನು ಸೇರಿಸಿ, ಎಲೆಗಳನ್ನು ಚನ್ನಾಗಿ ಬೇಯಿಸಿ. ಉಪ್ಪು ಸೇರಿಸಿ ಚೆನ್ನಾಗಿ ಕಲಸಿ ಗ್ಯಾಸನ್ನು ಆಫ್ ಮಾಡಿ.
ತಣ್ಣಗಾದ ನಂತರ ಹುರಿದ ಮೆಣಸು ಮತ್ತು ಬೇಯಿಸಿದ ಗೊಂಗುರ ಮಿಶ್ರಣವನ್ನು ಮಿಕ್ಸಿಗೆ ಹಾಕಿ ದಪ್ಪ ಪೇಸ್ಟ್ ಆಗುವಂತೆ ರುಬ್ಬಿ. ಕೊನೆಯಲ್ಲಿ ಬಾಣಲೆಗೆ ಸ್ವಲ್ಪ ಎಣ್ಣೆ ಬಿಸಿ ಮಾಡಿ ಸಾಸಿವೆ ಹಾಕಿ ಸಿಡಿಸಿದ ನಂತರ ಈ ಚಟ್ನಿಗೆ ಒಗ್ಗರಣೆ ಹಾಕಿ.
ಸಿದ್ಧವಾದ ಗೊಂಗುರ ಚಟ್ನಿಯನ್ನು ಬಿಸಿ ಅಕ್ಕಿ, ದೋಸೆ ಅಥವಾ ಚಪಾತಿಯ ಜೊತೆ ಆಸ್ವಾದಿಸಬಹುದು.


