ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿಯ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಪೊಲೀಸರು ಕಳೆದ ಒಂದು ವಾರದಿಂದ ಅಕ್ರಮ ವಲಸಿಗರ ವಿರುದ್ಧ ಸರಣಿ ಕಾರ್ಯಾಚರಣೆ ನಡೆಸಿದ್ದು, ಒಟ್ಟು 34 ಮಂದಿ ಶಂಕಿತ ಬಾಂಗ್ಲಾದೇಶಿ ಪ್ರಜೆಗಳನ್ನು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಈ ದಾಳಿ ನಡೆದಿದೆ.
ಎಲೆಕ್ಟ್ರಾನಿಕ್ ಸಿಟಿ: 7ಕ್ಕೂ ಹೆಚ್ಚು ಮಂದಿ ವಶಕ್ಕೆ.
ಹೆಬ್ಬಗೋಡಿ: 16 ಮಂದಿ ಪತ್ತೆ.
ಬೇಗೂರು: 10 ಮಂದಿ ಶಂಕಿತರ ಬಂಧನ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈ ವಲಸಿಗರು ಭಾರತಕ್ಕೆ ಅಕ್ರಮವಾಗಿ ನುಸುಳಿ, ಇಲ್ಲಿ ನಕಲಿ ಪಾಸ್‌ಪೋರ್ಟ್ ಮತ್ತು ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸಿಕೊಂಡಿದ್ದರು. ಇವರು ನಗರದ ಹೊರವಲಯದ ಗುಜರಿ ಗೋದಾಮುಗಳು, ಶೆಡ್‌ಗಳು ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸವಾಗಿದ್ದರು. ಕೆಲವರು ಹಗಲಿನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರೆ, ಇನ್ನೂ ಕೆಲವರು ರಾತ್ರಿ ವೇಳೆ ಚಿಂದಿ ಆಯುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ. ಸದ್ಯ ಎಲ್ಲರನ್ನು ಎಫ್‌ಆರ್‌ಆರ್‌ಒ ಮುಂದೆ ಹಾಜರುಪಡಿಸಲಾಗಿದ್ದು, ದಾಖಲೆಗಳ ಮರುಪರಿಶೀಲನೆ ನಡೆಯುತ್ತಿದೆ.
ಇನ್ನೊಂದೆಡೆ, ಕೋಗಿಲು ಲೇಔಟ್‌ನಲ್ಲಿ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ ಎಂಬ ಸುದ್ದಿಯನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ನಿರಾಕರಿಸಿದ್ದಾರೆ. ಅಲ್ಲಿ ವಾಸವಿರುವವರ ಪಟ್ಟಿಯನ್ನು ಪರಿಶೀಲಿಸಲಾಗಿದ್ದು, ಅಕ್ರಮ ವಲಸಿಗರು ಇರುವುದು ಸುಳ್ಳು ಎಂದು ಅವರು ಸ್ಪಷ್ಟಪಡಿಸಿದ್ದಾರೆ.


