ಹೊಸದಿಗಂತ ಡಿಜಿಟಲ್ ಡೆಸ್ಕ್:
ತ್ವರಿತ ವಿತರಣೆಯ ಹೆಸರಿನಲ್ಲಿ ಗಿಗ್ ಕಾರ್ಮಿಕರ ಮೇಲೆ ಹೆಚ್ಚುತ್ತಿರುವ ಒತ್ತಡದ ಕುರಿತು ದೇಶಾದ್ಯಂತ ಚರ್ಚೆ ನಡೆಯುತ್ತಿದ್ದ ಬೆನ್ನಲ್ಲೇ ಬ್ಲಿಂಕಿಟ್ ಮಹತ್ವದ ನಿರ್ಧಾರ ಕೈಗೊಂಡಿದೆ. ಕೇವಲ 10 ನಿಮಿಷಗಳಲ್ಲಿ ಮನೆ ಬಾಗಿಲಿಗೆ ವಸ್ತು ತಲುಪಿಸುವ ವ್ಯವಸ್ಥೆಯನ್ನು ಕಂಪನಿ ತನ್ನ ಎಲ್ಲಾ ವೇದಿಕೆಗಳಿಂದ ಹಿಂತೆಗೆದುಕೊಂಡಿದೆ.
ಇತ್ತೀಚೆಗೆ ಡಿಸೆಂಬರ್ 31ರಂದು ಸ್ವಿಗ್ಗಿ, ಜೊಮಾಟೊ, ಫ್ಲಿಪ್‌ಕಾರ್ಟ್ ಮತ್ತು ಬ್ಲಿಂಕಿಟ್ ಸೇರಿದಂತೆ ವಿವಿಧ ಆನ್‌ಲೈನ್ ಆ್ಯಪ್‌ಗಳ ಗಿಗ್ ಕಾರ್ಮಿಕರು ಉದ್ಯೋಗ ಭದ್ರತೆ ಹಾಗೂ ಸುರಕ್ಷತೆಗಾಗಿ ಮುಷ್ಕರ ನಡೆಸಿದ್ದರು. ಈ ವೇಳೆ, ಅತೀ ಕಡಿಮೆ ಸಮಯದಲ್ಲಿ ವಿತರಣೆಗೆ ಒತ್ತಾಯಿಸುವ ನೀತಿ ಸವಾರರ ಜೀವಕ್ಕೆ ಅಪಾಯಕಾರಿಯಾಗಿದೆ ಎಂಬ ಬೇಡಿಕೆ ಬಲವಾಗಿ ಕೇಳಿಬಂದಿತ್ತು. ಸಾಮಾಜಿಕ ಜಾಲತಾಣಗಳಲ್ಲಿಯೂ 10 ನಿಮಿಷ ಡೆಲಿವರಿ ಮಾದರಿಯ ಬಗ್ಗೆ ಸಾರ್ವಜನಿಕರಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು.
ಈ ವಿಚಾರದಲ್ಲಿ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಮಧ್ಯಪ್ರವೇಶಿಸಿದ್ದು, ಬ್ಲಿಂಕಿಟ್, ಜೆಪ್ಟೊ, ಸ್ವಿಗ್ಗಿ ಮತ್ತು ಜೊಮಾಟೊ ಸಂಸ್ಥೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾರ್ಮಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಕಟ್ಟುನಿಟ್ಟಾದ ವಿತರಣಾ ಸಮಯದ ಭರವಸೆಗಳನ್ನು ತೆಗೆದುಹಾಕುವಂತೆ ಸಲಹೆ ನೀಡಿದ ಬಳಿಕ ಬ್ಲಿಂಕಿಟ್ ಈ ಸೇವೆಯನ್ನು ಸ್ಥಗಿತಗೊಳಿಸಿದೆ.
ಸರ್ಕಾರಕ್ಕೆ ನೀಡಿದ ಭರವಸೆಯಂತೆ, ಈ ನಾಲ್ಕು ಕಂಪನಿಗಳು ತಮ್ಮ ಜಾಹೀರಾತುಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ‘ನಿಗದಿತ ವೇಗದ ವಿತರಣೆ’ ಎನ್ನುವ ಸಂದೇಶಗಳನ್ನು ತೆಗೆದುಹಾಕಲು ಒಪ್ಪಿವೆ.


