ಹೊಸದಿಗಂತ ಡಿಜಿಟಲ್ ಡೆಸ್ಕ್:
ದರೋಡೆಯನ್ನೇ ವೃತ್ತಿ ಮಾಡಿಕೊಂಡಿದ್ದ, ಹತ್ತಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಕುಖ್ಯಾತ ದರೋಡೆಕೋರರನ್ನು ಕೆಂಗೇರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುರೇಶ್ (ಸೂರಿ), ಶಶಿಕುಮಾರ್ ಮತ್ತು ಅಖಿಲ್ (ಕೋಜ) ಬಂಧಿತ ಆರೋಪಿಗಳು.
ಹೊಸ ವರ್ಷದ ಮುನ್ನಾದಿನ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ 1 ಲಕ್ಷ ದೋಚಿದ್ದ ಈ ಗ್ಯಾಂಗ್ ವಿರುದ್ಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಾಗ ಇವರ ದರೋಡೆಗಳ ಕರಾಳ ಪಟ್ಟಿ ಬಯಲಾಗಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ ಬ್ಯಾಡರಹಳ್ಳಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಈ ಕಿರಾತಕರು, ಬಾಲ ಕಾರಾಗೃಹದಿಂದ ಹೊರಬಂದರೂ ತಮ್ಮ ಹಳೆಯ ಚಾಳಿಯನ್ನು ಬಿಟ್ಟಿರಲಿಲ್ಲ. ನಗರದ ಹೊರವಲಯಗಳಲ್ಲಿ ರಾತ್ರಿ ವೇಳೆ ಸಂಚರಿಸುವವರನ್ನು ಚಾಕು-ಚೂರಿ ತೋರಿಸಿ ಬೆದರಿಸುವುದು ಇವರ ಸ್ಟೈಲ್. ಹಣ ನೀಡದಿದ್ದರೆ ಹಲ್ಲೆ ನಡೆಸಲು ಕೂಡ ಇವರು ಹಿಂದೆಮುಂದೆ ನೋಡುತ್ತಿರಲಿಲ್ಲ.
ಸೂರ್ಯ ಸಿಟಿ, ಮಾದನಾಯಕನಹಳ್ಳಿ, ಹೆಬ್ಬಗೋಡಿ, ಬ್ಯಾಡರಹಳ್ಳಿ ಸೇರಿದಂತೆ ಹಲವು ಕಡೆ 30ಕ್ಕೂ ಹೆಚ್ಚು ದರೋಡೆಗಳನ್ನು ನಡೆಸಿದ್ದಾರೆ. ಎಂ.ಎಂ. ಹಿಲ್ಸ್‌ಗೆ ಪ್ರವಾಸಕ್ಕೆ ಹೋಗಿದ್ದಾಗಲೂ ಅಲ್ಲಿನ ಪ್ರೇಮಿಗಳನ್ನು ಬೆದರಿಸಿ ಸುಲಿಗೆ ಮಾಡಿದ್ದ ಹುಂಬತನ ಇವರದ್ದು.
ಸದ್ಯ ಪೊಲೀಸರು ಮೂವರನ್ನು ಜೈಲಿಗಟ್ಟಿದ್ದು, ಈ ಗ್ಯಾಂಗ್‌ನಿಂದ ಸಂತ್ರಸ್ತರಾದವರು ನಿಟ್ಟುಸಿರು ಬಿಡುವಂತಾಗಿದೆ.


