ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೆಹಲಿ ಭೇಟಿಯನ್ನು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಸಿ.ಟಿ. ರವಿ ಅವರು ತೀವ್ರವಾಗಿ ಟೀಕಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಭೇಟಿಯ ಹಿಂದೆ ಆಡಳಿತಾತ್ಮಕ ಹಿತಾಸಕ್ತಿಗಿಂತ ಹೆಚ್ಚಾಗಿ ರಾಜಕೀಯ ಲಾಭದ ಉದ್ದೇಶವಿದೆ ಎಂದು ಆರೋಪಿಸಿದ್ದಾರೆ.
ಮುಂದೆ ಬರಲಿರುವ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಗಳಿಗೆ ಕರ್ನಾಟಕದಿಂದ ಎಷ್ಟು ಹಣ ನೀಡುತ್ತೀರಿ ಎಂದು ಕೇಳಲು ರಾಹುಲ್ ಗಾಂಧಿ ಅವರು ಈ ಇಬ್ಬರು ನಾಯಕರನ್ನು ಕರೆಸಿಕೊಂಡಿರಬಹುದು ಎಂದು ರವಿ ಗುಡುಗಿದ್ದಾರೆ. “ಕಾಂಗ್ರೆಸ್ ಹೈಕಮಾಂಡ್‌ಗೆ ಕರ್ನಾಟಕದ ಅಭಿವೃದ್ಧಿಗಿಂತ ರಾಜ್ಯದ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದರಲ್ಲೇ ಹೆಚ್ಚಿನ ಆಸಕ್ತಿ ಇದೆ” ಎಂದು ಅವರು ಕಿಡಿಕಾರಿದ್ದಾರೆ.
ರಾಜ್ಯ ಕಾಂಗ್ರೆಸ್‌ನ ಆಂತರಿಕ ಕಚ್ಚಾಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಸಮರದಿಂದ ರಾಜ್ಯದ ಆಡಳಿತ ಹಳ್ಳ ಹಿಡಿಯುತ್ತಿದೆ. ಈ ಕಚ್ಚಾಟವನ್ನು ಬಗೆಹರಿಸಲು ರಾಹುಲ್ ಗಾಂಧಿ ಬುದ್ಧಿ ಹೇಳುತ್ತಾರೆ ಎಂಬ ವಿಶ್ವಾಸ ಯಾರಿಗಿದೆ? ಬುದ್ಧಿ ಇರುವವರು ಬುದ್ಧಿ ಹೇಳುತ್ತಾರೆ, ಆದರೆ ಬುದ್ಧಿ ಇಲ್ಲದವರು ಏನು ಹೇಳಲು ಸಾಧ್ಯ?” ಎಂದು ರಾಹುಲ್ ಗಾಂಧಿ ಅವರ ಸಾಮರ್ಥ್ಯವನ್ನು ಲೇವಡಿ ಮಾಡಿದರು.


