ಆರೋಗ್ಯಕರ ಸ್ನ್ಯಾಕ್ ಬೇಕು, ಆದರೆ ಸಮಯವೂ ಕಡಿಮೆ, ಎಣ್ಣೆ ಜಾಸ್ತಿ ಆಗಬಾರದು ಅನ್ನೋ ಆಲೋಚನೆ ಇದ್ರೆ ಓಟ್ಸ್ ಪ್ಯಾನ್‌ಕೇಕ್ ಬೆಸ್ಟ್. ಫೈಬರ್ ತುಂಬಿರುವ ಓಟ್ಸ್ ಜೀರ್ಣಕ್ರಿಯೆಗೆ ಒಳ್ಳೆಯದು, ಹೆಚ್ಚು ಸಮಯ ಹೊಟ್ಟೆ ತುಂಬಿದ ಅನುಭವ ಕೊಡುತ್ತೆ. ಸಂಜೆ ಹಸಿವು ತಣಿಸಿಕೊಳ್ಳಲು ಅಥವಾ ಮಕ್ಕಳಿಗೆ ಹೆಲ್ತಿ ಸ್ನ್ಯಾಕ್ ಆಗಿ ಈ ಓಟ್ಸ್ ಪ್ಯಾನ್‌ಕೇಕ್ ಬಹಳ ಉಪಯುಕ್ತ.
ಬೇಕಾಗುವ ಸಾಮಗ್ರಿಗಳು
ಓಟ್ಸ್ – 1 ಕಪ್
ರವೆ ಅಥವಾ ಅಕ್ಕಿಹಿಟ್ಟು – 2 ಟೇಬಲ್ ಸ್ಪೂನ್
ಮೊಸರು – ½ ಕಪ್
ಈರುಳ್ಳಿ – 1 ಸಣ್ಣದು (ಸಣ್ಣದಾಗಿ ಕತ್ತರಿಸಿದದ್ದು)
ಕ್ಯಾರೆಟ್ – 1 (ತುರಿದದ್ದು)
ಹಸಿಮೆಣಸು – 1 (ಸಣ್ಣದಾಗಿ ಕತ್ತರಿಸಿದದ್ದು)
ಜೀರಿಗೆ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಅಗತ್ಯವಿದ್ದಷ್ಟು
ಎಣ್ಣೆ – ಸ್ವಲ್ಪ
ತಯಾರಿಸುವ ವಿಧಾನ
ಮೊದಲು ಓಟ್ಸ್ ಅನ್ನು ಮಿಕ್ಸಿ ಜಾರಿನಲ್ಲಿ ಸ್ವಲ್ಪ ದಪ್ಪದ ಪುಡಿಯಾಗಿ ಮಾಡಿ ಅದನ್ನು ಒಂದು ಪಾತ್ರೆಗೆ ಹಾಕಿ, ರವೆ ಅಥವಾ ಅಕ್ಕಿಹಿಟ್ಟು ಸೇರಿಸಿ. ಇದಕ್ಕೆ ಮೊಸರು, ಈರುಳ್ಳಿ, ಕ್ಯಾರೆಟ್, ಹಸಿಮೆಣಸು, ಜೀರಿಗೆ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅಗತ್ಯವಿದ್ದಷ್ಟು ನೀರು ಸೇರಿಸಿ ದೋಸೆ ಹಿಟ್ಟಿನಷ್ಟೇ ಗಟ್ಟಿಯಾದ ಮಿಶ್ರಣ ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು 10 ನಿಮಿಷ ಬಿಟ್ಟು ಬಿಡಿ.
ನಂತರ ತವಾ ಬಿಸಿ ಮಾಡಿ ಸ್ವಲ್ಪ ಎಣ್ಣೆ ಹಚ್ಚಿ. ಒಂದು ಸೌಟು ಹಿಟ್ಟನ್ನುತವಾಗೆ ಹಾಕಿ ಸ್ವಲ್ಪ ದಪ್ಪವಾಗಿ ಹರಡಿ. ಮಧ್ಯಮ ಉರಿಯಲ್ಲಿ ಎರಡೂ ಬದಿಗಳೂ ಚಿನ್ನದ ಬಣ್ಣ ಬರುವವರೆಗೆ ಬೇಯಿಸಿ.
ಹೆಲ್ತಿ ಓಟ್ಸ್ ಪ್ಯಾನ್‌ಕೇಕ್ ಸಿದ್ಧ. ಇದನ್ನು ಹಸಿರು ಚಟ್ನಿ, ಟೊಮ್ಯಾಟೋ ಸಾಸ್ ಅಥವಾ ಮೊಸರಿನ ಜೊತೆಗೆ ಸವಿಯಬಹುದು.


