Tuesday, January 13, 2026
Tuesday, January 13, 2026
spot_img

ವಿಬಿ-ಜಿ ರಾಮ್ ಜಿ ಕಾಯ್ದೆಯಿಂದ ಬಡವರಿಗೆ, ಕೂಲಿಕಾರರಿಗೆ ನೆರವು: ಪರಿಷತ್ ಸದಸ್ಯ ಅಮರನಾಥ ಪಾಟೀಲ್

ಹೊಸ ದಿಗಂತ ವರದಿ, ಕಲಬುರಗಿ:

ಭಾರತ ಸರ್ಕಾರದ ವಿಬಿ-ಜಿ-ರಾಮ್ ಜಿ ಕಾಯ್ದೆ ಜಾರಿಯಿಂದ ರಾಜ್ಯದ ಆರ್ಥಿಕತೆಯ ಮೇಲೆ ಹೊಡೆತ ಬಿಳಲಿದೆ ಎಂಬ ಕಾಂಗ್ರೆಸ್ ಆರೋಪ ಸುಳ್ಳು. ಕಾಯಿದೆಯಿಂದ ಬಡವರಿಗೆ,ಕೂಲಿಕಾರರಿಗೆ ನೆರವಾಗಲಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ, ಬಿಜೆಪಿ ಹಿರಿಯ ಮುಖಂಡ ಅಮರನಾಥ ಪಾಟೀಲ್ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು,ನೂತನ ವಿಬಿ-ಜಿ ರಾಮ್ ಜಿ ಕಾಯ್ದೆಯಿಂದ ಕೆಲಸದ ದಿನಗಳನ್ನು ೧೦೦ ರಿಂದ ೧೨೫ಕ್ಕೆ ಏರಿಕೆಯಾಗಿದೆ.ಇದರಿಂದ ಗ್ರಾಮೀಣ ಭಾಗದ ಜನರಿಗೆ ಉದ್ಯೋಗದ ಜೊತೆಗೆ ಆದಾಯದ ಭದ್ರತೆಯೂ ಹೆಚ್ಚಾಗಲಿದೆ.ಮನರೇಗಾ ಯೋಜನೆಗೆ ತಿದ್ದುಪಡಿ ಮಾಡುವ ಮೂಲಕ ನಕಲಿ ಜಾಬ್ ಕಾರ್ಡ್,ಅಸ್ತಿತ್ವದಲ್ಲಿಲ್ಲದ ಕಾರ್ಡ್, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಭಾರತ ಸರ್ಕಾರ ಸಂಸದೀಯ ಸ್ಥಾಯಿ ಸಮಿತಿಯಿಂದ ನ್ಯೂನತೆ ಸರಿಪಡಿಸಿ ವಿಬಿ ಜಿ-ರಾಮ್ ಜಿ ಕಾನೂನು ಜಾರಿಗೆ ತಂದಿದೆ ಎಂದರು.

ನೂತನ ಜಾರಿಗೆ ಬಂದಿರುವ ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಎಲ್ಲಾ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಯೋಜನೆಗೆ ಹೊಸ ಆಯಾಮ ನೀಡಲಾಗಿದೆ.ಒಬ್ಬಂಟಿ ಮಹಿಳೆಯರು,ಅಂಗವೀಕಲರು,೬೦ ವರ್ಷ ಮೇಲ್ಪಟ್ಟವರು, ತೃತೀಯ ಲಿಂಗಿಗಳು, ದುರ್ಬಲ ಆದಿವಾಸಿ ಸಮುದಾಯದ ಸದಸ್ಯರು ಇವರುಗಳಿಗೆ ವಿಶೇಷ ಗ್ರಾಮೀಣ ಉದ್ಯೋಗ ಖಾತರಿ ಕಾರ್ಡ್ ನೀಡುವ ವ್ಯವಸ್ಥೆ ಈ ಯೋಜನೆಯಲ್ಲಿ ಮಾಡಲಾಗಿದೆ ಎಂದು ಹೇಳಿದರು.

ಹಿಂದಿನ ಮನರೇಗಾ ಹೆಸರು ಇದ್ದಾಗ ಕಳೆದ ೨೦ ವರ್ಷಗಳಲ್ಲಿ ೧೧ ಲಕ್ಷ ಪ್ರಕರಣಗಳು,೩೦೨ ಕೋಟಿ ಅಕ್ರಮಗಳು ಪತ್ತೆಯಾಗಿವೆ ಎಂದು ಸಂಸದೀಯ ಸ್ಥಾಯಿ ಸಮಿತಿ, ನ್ಯೂನತೆಗಳನ್ನು ಸರಿಪಡಿಸಿ, ಮಹಾತ್ಮ ಗಾಂಧೀಜಿಯವರ ಕನಸಿನಂತೆ ಎಲ್ಲರ ಕೈಗಳಿಗೆ ಕೆಲಸ ನೀಡುವ ನಿಟ್ಟಿನಲ್ಲಿ, ಹೊಸ ವಿಬಿ -ಜಿ- ರಾಮ್ ಜಿ ಜಾರಿಗೆ ತರಲಾಗಿದೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರ ೩೦ ಯೋಜನೆಗಳ ಹೆಸರನ್ನು ಬದಲಿಸಿದೆ ಎಂದು ಹೇಳಿಕೆ ನೀಡಿದ್ದಾರೆ. ಹಾಗಾದರೇ, ಜವಾಹರ್ ರೋಜ್ಗಾರ್ ಯೋಜನೆಯನ್ನು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಎಂದು ಬದಲಾಯಿಸಿದ್ದು ಯಾರು ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ,ಶಾಸಕ ಬಸವರಾಜ ಮತ್ತಿಮಡು, ಅವಿನಾಶ್ ಜಾಧವ್,ವಿಧಾನ ಪರಿಷತ್ ಸದಸ್ಯ ಬಿಜಿ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ,ಪ್ರ. ಕಾರ್ಯದರ್ಶಿ ಮಹಾದೇವ ಬೆಳಮಗಿ ಇದ್ದರು.

Most Read

error: Content is protected !!