ಹೊಸ ದಿಗಂತ ವರದಿ,ಬೆಳಗಾವಿ :
ನಾನು ಬೇರೆಯವರಂತೆ ರಾಜಕೀಯದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯಬೇಕೆಂದು ಅಂದುಕೊಂಡು ರಾಜಕೀಯಕ್ಕೆ ಪ್ರವೇಶ ಮಾಡಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಎಸ್ ವೈ ರೀತಿ ಜನಪ್ರಿಯತೆಯ ಆಸೆ ನನಗೂ ಇದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಳಗಾವಿಯ ಸಹ್ಯಾದ್ರಿ ನಗರದಲ್ಲಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಉದ್ಯಾನವನವನ್ನು ಲೋಕಾರ್ಪಣೆಗೊಳಿಸಿದ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮೆಲ್ಲರ ಆರ್ಶೀವಾದ ನನ್ನ ಮೇಲಿದ್ದು, ನಿಮ್ಮೆಲ್ಲರ ಸೇವೆ ಮಾಡಲು ನಾನು ಸದಾ ಸಿದ್ಧ ಎಂದು ಬೆಳಗಾವಿ ಗ್ರಾಮೀಣ ಜನತೆಯ ಕೊಂಡಾಡಿದರು.
ಕಳೆದ ವರ್ಷದ ಹಿಂದೆ ನಡೆದಿದ್ದ ಭೀಕರ ರಸ್ತೆ ಅಪಘಾತವನ್ನು ನೆನಪಿಸಿಕೊಂಡ ಸಚಿವೆ ಲಕ್ಷ್ಮೀ, ಇನ್ನೂ ನನ್ನ ಆಯುಷ್ಯ ದಾರ ಗಟ್ಟಿಯಾಗಿದೆ. ಜನರ ಆರ್ಶೀವಾದ ನನ್ನ ಮೇಲಿದೆ. ಜನಸೇವೆ ನಾನು ಬದ್ಧಳಾಗಿದ್ದೇನೆ. ಜನಪ್ರಿಯ ಮಹಿಳಾ ನಾಯಕಿಯಾಗಿರುವ ತಮ್ಮ ಆಕಾಂಕ್ಷೆಯನ್ನು ಜನರ ಮುಂದೆ ಬಿಚ್ಚಿಟ್ಟರು.
ನನ್ನ ಅಪಘಾತವಾಗಿ ಇಂದಿಗೆ ಒಂದು ವರ್ಷವಾಯಿತು. ಜನರು ಇಂದು ಎಲ್ಲಿಯೂ ಹೋಗಬೇಡಿ ಎನ್ನುತ್ತಿದ್ದಾರೆ. ಆದರೆ ನನ್ನ ಆಯುಷ್ಯ ದಾರ ತುಂಬಾ ಗಟ್ಟಿಯಾಗಿದೆ. ಕ್ಷೇತ್ರಕ್ಕಾಗಿ ಇನ್ನು ಕೆಲಸ ಮಾಡಬೇಕಿದೆ. ಹಲವಾರು ಸಾಧನೆ ಮಾಡಿ, ಜನರ ಸೇವೆ ಮಾಡಿ, ಜನನಾಯಕಿ ಎನಿಸಿಕೊಳ್ಳುವ ಹುಚ್ಚು ಹಂಬಲವಿದೆ. ಸಿಎಂ ಸಿದ್ಧರಾಮಯ್ಯನವರಾಗಲಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರಾಗಲಿ ಅವರಿಗೆ ಜನಪ್ರಿಯ ನಾಯಕರೆನಿಸಿಕೊಂಡಿದ್ದಾರೆ. ಅವರಂತೆ ನನಗೂ ಮಹಿಳೆಯರಲ್ಲಿ ಜನಪ್ರಿಯ ನಾಯಕಿ ಎನಿಸಿಕೊಳ್ಳಬೇಕೆಂಬ ಹುಚ್ಚಿದೆ ಎಂದರು.
ಕಳೆದ ಬಾರಿ ಅಪಘಾತದಲ್ಲಿ ಏನಾದರೂ ಆಗಿದ್ದರೇ, ಇದೀಗ ನನ್ನ ವರ್ಷದ ಜಯಂತಿ ಆಚರಣೆಯಾಗುತ್ತಿತ್ತು. ಆದರೆ, ನಿಮ್ಮೆಲ್ಲರ ಆರ್ಶೀವಾದ ನನ್ನ ಮೇಲಿದ್ದು, ನಿಮ್ಮೆಲ್ಲರ ಸೇವೆ ಮಾಡಲು ನಾನು ಸದಾ ಸಿದ್ಧಳಾಗಿದ್ದು, ಎಲ್ಲರನ್ನು ಜೊತೆಗೂಡಿಸಿಕೊಂಡು ಮುಂದೆವರೆಯುತ್ತೇನೆ ಎಂದರು.


