ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಹಾಗೂ ಮಾಜಿ ಸಚಿವ ಹೆಚ್.ಡಿ. ರೇವಣ್ಣ ನಡುವಿನ ರಾಜಕೀಯ ಸಮರ ಈಗ ತುತ್ತತುದಿಗೆ ತಲುಪಿದೆ. “ಅರಸೀಕೆರೆಯಿಂದ ಸ್ಪರ್ಧಿಸಿ” ಎಂಬ ಶಿವಲಿಂಗೇಗೌಡರ ಪಂಥಾಹ್ವಾನವನ್ನು ಸ್ವೀಕರಿಸಿರುವ ರೇವಣ್ಣ, ಆಲೂರು ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕರ ವಿರುದ್ಧ ಏಕವಚನದಲ್ಲೇ ಗುಡುಗಿದ್ದಾರೆ.
ಶಿವಲಿಂಗೇಗೌಡರ ಸವಾಲಿಗೆ ಪ್ರತ್ಯುತ್ತರ ನೀಡಿದ ರೇವಣ್ಣ, “ಅವನು ಎಲ್ಲಿದ್ದವನು? ಅಷ್ಟು ಮಾತನಾಡುತ್ತಾನಾ? ಇವನಿಗೆಲ್ಲಾ ನಾನು ಹೆದರುತ್ತೇನಾ? ಆ ಸವಾಲನ್ನು ನಾನು ಸ್ವೀಕರಿಸುತ್ತೇನೆ. ಆದರೆ ಅಂತಿಮ ನಿರ್ಧಾರ ಹೈಕಮಾಂಡ್ ಮಾಡಲಿದೆ,” ಎಂದು ಗುಡುಗಿದರು. ಅರಸೀಕೆರೆಯಲ್ಲಿ ಏನು ನಡೆಯುತ್ತಿದೆ ಎಂಬುದು ತಮಗೆ ಚೆನ್ನಾಗಿ ತಿಳಿದಿದೆ ಎಂದು ಅವರು ಎಚ್ಚರಿಸಿದರು.
ಶಿವಲಿಂಗೇಗೌಡರ ರಾಜಕೀಯ ಬೆಳವಣಿಗೆಯನ್ನು ಸ್ಮರಿಸಿದ ರೇವಣ್ಣ, “ಚುನಾವಣೆಯಲ್ಲಿ ಸೋತ ದಿನ ಈ ಗಿರಾಕಿಯನ್ನು ಮನೆಗೆ ಕರೆದೊಯ್ದು ಊಟ ಹಾಕಿದ್ದೆ. ಲಿಂಗಾಯತ ಸಮುದಾಯಕ್ಕೆ ಸೀಟು ನೀಡಬೇಕು ಎಂದು ದೇವೇಗೌಡರು ಹೇಳಿದ್ದರು. ಆದರೆ ಅವರ ಮಾತು ಮೀರಿ, ಎಲ್ಲೋ ಇದ್ದ ಈ ‘ಕೊಚ್ಚೆ’ಗೆ ಸೀಟು ನೀಡಿ ತಪ್ಪು ಮಾಡಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು. ಜೇನುಕಲ್ ಸಿದ್ದೇಶ್ವರನ ಸನ್ನಿಧಿಯಲ್ಲಿ ನಿಂತು ಸತ್ಯ ಹೇಳಲಿ, ಅವರ ಏಳಿಗೆಗೆ ಯಾರು ಕಾರಣ ಎಂಬುದು ತಿಳಿಯುತ್ತದೆ ಎಂದು ಕಿಡಿಕಾರಿದರು.
“ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ಕುಮಾರಸ್ವಾಮಿ ಮತ್ತು ನಾನು ಸಹಿ ಹಾಕಿದ್ದೆವು. ನಮ್ಮ ಸಮಾಜದವರ ವಿರೋಧದ ನಡುವೆಯೂ ನಾವು ಬೆಂಬಲಿಸಿದ್ದೆವು. ಆದರೆ ಇಂದು ಅರಸೀಕೆರೆಯಲ್ಲಿ ವ್ಯಾಪಾರ ನಡೆಯುತ್ತಿದೆ,” ಎಂದು ಬೇಸರ ವ್ಯಕ್ತಪಡಿಸಿದ ರೇವಣ್ಣ, ಈ ಹೋರಾಟ ಇಲ್ಲಿಗೆ ಮುಗಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.


