Wednesday, January 14, 2026
Wednesday, January 14, 2026
spot_img

ರಾಜ್ಯ ರಾಜಕಾರಣದಲ್ಲಿ ಹೈಕಮಾಂಡ್ ಹಸ್ತಕ್ಷೇಪ: ಡಿಕೆಶಿ ಪೋಸ್ಟ್ ಬೆನ್ನಲ್ಲೇ ಕುತೂಹಲದ ಅಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೈಸೂರು ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ನಡೆದ ಸಂಕ್ಷಿಪ್ತ ಹಾಗೂ ಗಂಭೀರ ಮಾತುಕತೆ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. “ನೀವೇನು ಚಿಂತೆ ಮಾಡಬೇಡಿ, ಶೀಘ್ರವೇ ನಿಮ್ಮನ್ನು ದೆಹಲಿಗೆ ಕರೆಸಿಕೊಳ್ಳುತ್ತೇನೆ” ಎಂದು ರಾಹುಲ್ ನೀಡಿದ್ದಾರೆನ್ನಲಾದ ಭರವಸೆಯ ಬೆನ್ನಲ್ಲೇ, ಡಿಕೆಶಿ ಹಂಚಿಕೊಂಡಿರುವ ಸೋಷಿಯಲ್ ಮೀಡಿಯಾ ಪೋಸ್ಟ್ ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಮುನ್ಸೂಚನೆಯೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

ಮಂಗಳವಾರ ಊಟಿಗೆ ತೆರಳುವ ಮಾರ್ಗಮಧ್ಯೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿಯವರನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿಯಾಗಿದ್ದರು. ಈ ವೇಳೆ ರಾಹುಲ್ ಅವರು ಶಿವಕುಮಾರ್ ಅವರನ್ನು ಪಕ್ಕಕ್ಕೆ ಕರೆದೊಯ್ದು ನಡೆಸಿದ ಖಾಸಗಿ ಚರ್ಚೆ ರಾಜಕೀಯ ವಲಯದ ಕೆಂಗಣ್ಣು ಬೀರಿದೆ. ಮೂಲಗಳ ಪ್ರಕಾರ, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿದ ರಾಹುಲ್, ಡಿಕೆಶಿಗೆ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ.

ಬುಧವಾರ ಬೆಳಗ್ಗೆ ಎಕ್ಸ್ ಖಾತೆಯಲ್ಲಿ ಸಂದೇಶವೊಂದನ್ನು ಹಂಚಿಕೊಂಡಿರುವ ಡಿ.ಕೆ. ಶಿವಕುಮಾರ್, “ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗುವುದಿಲ್ಲ” ಎಂದು ಬರೆದುಕೊಂಡಿದ್ದಾರೆ. ಅವರ ಈ ಸಾಲುಗಳು ಸಿಎಂ ಗಾದಿಯ ಆಕಾಂಕ್ಷಿಯಾಗಿರುವ ಅವರ ಪ್ರಸಕ್ತ ಮನಸ್ಥಿತಿಯನ್ನು ಅಥವಾ ಹೈಕಮಾಂಡ್‌ನಿಂದ ಸಿಕ್ಕಿರುವ ಯಾವುದೋ ಭರವಸೆಯನ್ನು ಸೂಚಿಸುತ್ತಿದೆಯೇ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ.

ಈ ತಿಂಗಳ ಅಂತ್ಯದಲ್ಲಿ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ನೇತೃತ್ವದಲ್ಲಿ ಹೈಕಮಾಂಡ್ ಸಭೆ ನಡೆಯುವ ಸಾಧ್ಯತೆಯಿದೆ. ಈ ಸಭೆಯಲ್ಲಿ ಅಧಿಕಾರ ಹಂಚಿಕೆ ಸೂತ್ರ ಅಥವಾ ಸಂಪುಟ ಪುನಾರಚನೆಯ ಬಗ್ಗೆ ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆಯಿದ್ದು, ರಾಜ್ಯ ರಾಜಕಾರಣದ ಮುಂದಿನ ದಿಕ್ಸೂಚಿ ಈ ಸಭೆಯ ಮೇಲೆ ಅವಲಂಬಿತವಾಗಿದೆ.

Most Read

error: Content is protected !!