ಹೊಸದಿಗಂತ ಡಿಜಿಟಲ್ ಡೆಸ್ಕ್:
ಫೆಬ್ರವರಿ 7 ರಿಂದ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಆದರೆ, ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಹಲವು ವಿದೇಶಿ ತಂಡಗಳು ದೊಡ್ಡ ಮಟ್ಟದ ಆತಂಕಕ್ಕೆ ಸಿಲುಕಿವೆ. ಇದಕ್ಕೆ ಮುಖ್ಯ ಕಾರಣ ಭಾರತದ ಕಠಿಣ ವೀಸಾ ನಿಯಮಗಳು ಮತ್ತು ಆ ತಂಡಗಳಲ್ಲಿರುವ ಪಾಕಿಸ್ತಾನ ಮೂಲದ ಆಟಗಾರರು.
ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿರುವ 20 ತಂಡಗಳ ಪೈಕಿ ಯುಎಸ್‌ಎ, ಯುಎಇ, ಇಂಗ್ಲೆಂಡ್, ಓಮನ್, ಇಟಲಿ, ಕೆನಡಾ, ಜಿಂಬಾಬ್ವೆ ಮತ್ತು ನೆದರ್‌ಲೆಂಡ್ಸ್ ತಂಡಗಳಲ್ಲಿ ಪಾಕಿಸ್ತಾನ ಮೂಲದ ಆಟಗಾರರಿದ್ದಾರೆ. ವರದಿಗಳ ಪ್ರಕಾರ, ಸುಮಾರು 15ಕ್ಕೂ ಹೆಚ್ಚು ಆಟಗಾರರು ಭಾರತಕ್ಕೆ ಬರಲು ವೀಸಾ ಪಡೆಯುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ.
ಅಮೆರಿಕ ತಂಡದ ಪ್ರಮುಖ ವೇಗಿ ಅಲಿ ಖಾನ್ ಅವರು ತಮಗೆ ಭಾರತದ ವೀಸಾ ನಿರಾಕರಿಸಲಾಗಿದೆ ಎಂಬ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇವರ ಜೊತೆಗೆ ಯುಎಸ್‌ಎ ತಂಡದ ಇತರ ಮೂವರು ಪಾಕ್ ಮೂಲದ ಆಟಗಾರರಿಗೂ ವೀಸಾ ಸಿಕ್ಕಿಲ್ಲ ಎನ್ನಲಾಗಿದೆ.
ಈ ಸಮಸ್ಯೆಯಿಂದ ಅತಿ ಹೆಚ್ಚು ತೊಂದರೆಗೊಳಗಾಗಿರುವುದು ಯುಎಇ ತಂಡ. ತಂಡದ ನಾಯಕ ಮುಹಮ್ಮದ್ ವಾಸಿಮ್ ಸೇರಿದಂತೆ ಒಟ್ಟು ಏಳು ಆಟಗಾರರು ಪಾಕಿಸ್ತಾನದಲ್ಲಿ ಜನಿಸಿದವರು. ಒಂದು ವೇಳೆ ಇವರಿಗೆ ವೀಸಾ ಸಿಗದಿದ್ದರೆ, ಯುಎಇ ತಂಡವು ತನ್ನ ಅರ್ಧದಷ್ಟು ಪ್ರಮುಖ ಆಟಗಾರರಿಲ್ಲದೆ ಮೈದಾನಕ್ಕಿಳಿಯಬೇಕಾದ ಅನಿವಾರ್ಯತೆ ಎದುರಾಗಲಿದೆ.
ವೀಸಾ ವಿಳಂಬ ಮತ್ತು ನಿರಾಕರಣೆಯಿಂದ ಕಂಗಾಲಾಗಿರುವ ವಿವಿಧ ಕ್ರಿಕೆಟ್ ಮಂಡಳಿಗಳು ಈಗ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮೊರೆ ಹೋಗಿವೆ. ಉನ್ನತ ಮಟ್ಟದ ರಾಜತಾಂತ್ರಿಕ ಹಸ್ತಕ್ಷೇಪವಿಲ್ಲದೆ ಈ ಸಮಸ್ಯೆ ಬಗೆಹರಿಯುವುದು ಕಷ್ಟ ಎನ್ನಲಾಗುತ್ತಿದೆ. ಒಂದು ವೇಳೆ ಪ್ರಮುಖ ಆಟಗಾರರು ಅನಿವಾರ್ಯವಾಗಿ ಟೂರ್ನಿಯಿಂದ ಹೊರಗುಳಿದರೆ, ಇದು ವಿಶ್ವಕಪ್‌ನ ಗುಣಮಟ್ಟ ಮತ್ತು ರೋಚಕತೆಯ ಮೇಲೆ ನೇರ ಪರಿಣಾಮ ಬೀರಲಿದೆ.


