Wednesday, January 14, 2026
Wednesday, January 14, 2026
spot_img

WPL ಇತಿಹಾಸದಲ್ಲಿ ಹೊಸ ದಾಖಲೆ: ಮೊದಲ ಬಾರಿಗೆ ‘ರಿಟೈರ್ಡ್ ಔಟ್’ ಆದ ಆಟಗಾರ್ತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳಾ ಪ್ರೀಮಿಯರ್ ಲೀಗ್‌ನ 6ನೇ ಪಂದ್ಯವು ಅತ್ಯಂತ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವು ಕೇವಲ ಬೌಂಡರಿ, ಸಿಕ್ಸರ್‌ಗಳಿಂದ ಮಾತ್ರವಲ್ಲದೆ, ಒಂದು ಅಪರೂಪದ ‘ಔಟ್’ನಿಂದಾಗಿ ಸುದ್ದಿಯಲ್ಲಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ಆರಂಭದಲ್ಲಿ ಅಬ್ಬರಿಸಿತ್ತು. ಮೊದಲ 10 ಓವರ್‌ಗಳಲ್ಲಿ ಕೇವಲ 4 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿ ಬೃಹತ್ ಮೊತ್ತದ ಮುನ್ಸೂಚನೆ ನೀಡಿತ್ತು. ಆದರೆ, ಕನಿಕಾ ಅಹುಜಾ ನಿರ್ಗಮನದ ನಂತರ ಚೊಚ್ಚಲ ಪಂದ್ಯವನ್ನಾಡಲು ಕ್ರೀಸ್‌ಗೆ ಬಂದ ಆಯುಷಿ ಸೋನಿ ರನ್ ಗಳಿಸಲು ಪರದಾಡಿದರು. 14 ಎಸೆತಗಳನ್ನು ಎದುರಿಸಿದ ಅವರು ಒಂದೂ ಬೌಂಡರಿ ಗಳಿಸದೆ ಕೇವಲ 11 ರನ್ ಮಾಡಿದರು. ಇದರಿಂದಾಗಿ 9ರ ಸರಾಸರಿಯಲ್ಲಿದ್ದ ರನ್ ವೇಗ ದಿಢೀರನೆ ಕುಸಿಯಿತು.

ತಂಡದ ಸ್ಕೋರ್ ವೇಗವನ್ನು ಹೆಚ್ಚಿಸುವ ಸಲುವಾಗಿ ಗುಜರಾತ್ ಜೈಂಟ್ಸ್ ಕೋಚ್ ಒಂದು ದಿಟ್ಟ ನಿರ್ಧಾರ ಮಾಡಿದರು. ಆಯುಷಿ ಸೋನಿಯನ್ನು ವಾಪಸ್ ಕರೆಸುವ ಮೂಲಕ ‘ರಿಟೈರ್ಡ್ ಔಟ್’ ಮಾಡಲಾಯಿತು. ಈ ಮೂಲಕ WPL ಇತಿಹಾಸದಲ್ಲಿ ರಿಟೈರ್ಡ್ ಔಟ್ ಆದ ಮೊದಲ ಆಟಗಾರ್ತಿ ಎಂಬ ಹಣೆಪಟ್ಟಿ ಸೋನಿ ಪಾಲಾಯಿತು.

ಸೋನಿ ಬದಲಿಗೆ ಕ್ರೀಸ್‌ಗೆ ಬಂದ ಭಾರ್ತಿ ಫಲ್ಮಾಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 15 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 3 ಫೋರ್‌ಗಳ ನೆರವಿನಿಂದ ಅಜೇಯ 36 ರನ್ ಸಿಡಿಸಿ ತಂಡದ ಮೊತ್ತವನ್ನು 192ಕ್ಕೆ ತಲುಪಿಸಿದರು.

193 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ನೇತೃತ್ವದಲ್ಲಿ ಅದ್ಭುತವಾಗಿ ಹೋರಾಡಿತು. ಅಂತಿಮವಾಗಿ 19.2 ಓವರ್‌ಗಳಲ್ಲಿ 193 ರನ್ ಗಳಿಸಿದ ಮುಂಬೈ, 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

Most Read

error: Content is protected !!