ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್‌ನಲ್ಲಿನ ಆಂತರಿಕ ಭಿನ್ನಮತ ಮತ್ತು ಸಂಪುಟ ಪುನರ್‌ರಚನೆಯ ಚರ್ಚೆಗಳ ನಡುವೆ, ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾಹಿತಿ ನೀಡಿದ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್, “ನಿನ್ನೆ ವಿಮಾನ ನಿಲ್ದಾಣದಲ್ಲಿ ಕೇವಲ ಪ್ರಾಥಮಿಕ ಮಾತುಕತೆ ನಡೆದಿದೆ. ಹೆಚ್ಚಿನ ಚರ್ಚೆಗಾಗಿ ರಾಹುಲ್ ಗಾಂಧಿ ಇಬ್ಬರನ್ನೂ ದೆಹಲಿಗೆ ಕರೆದಿದ್ದಾರೆ,” ಎಂದು ತಿಳಿಸಿದರು.
ಸಂಕ್ರಾಂತಿ ಹಬ್ಬದ ನಂತರ ಈ ಭೇಟಿ ನಡೆಯುವ ಸಾಧ್ಯತೆಯಿದ್ದು, ಸಂಪುಟ ವಿಸ್ತರಣೆ ಹಾಗೂ ಮಂತ್ರಿ ಸ್ಥಾನದ ಆಕಾಂಕ್ಷಿಗಳ ಬೇಡಿಕೆಗಳ ಬಗ್ಗೆ ಅಲ್ಲಿ ಅಂತಿಮ ತೀರ್ಮಾನವಾಗಲಿದೆ. ತಾವೂ ಸಹ ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದು, ಹೈಕಮಾಂಡ್ ಸೂಚನೆಯಂತೆ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂಬ ವಿಶ್ವಾಸವನ್ನು ಪಟ್ಟಣ್ ವ್ಯಕ್ತಪಡಿಸಿದ್ದಾರೆ.


