ಹೊಸದಿಗಂತ ವರದಿ, ಯಾದಗಿರಿ:
ಉತ್ತರ ಕರ್ನಾಟಕದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾದ ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಜಾತ್ರೋತ್ಸವ ಲಕ್ಷಾಂತರ ಭಕ್ತರ ಮಧ್ಯೆ ಮಕರ ಸಂಕ್ರಮಣ ದಿನವಾದ ಬುಧವಾರದಂದು ಅದ್ದೂರಿಯಾಗಿ ನಡೆಯಿತು.
ಎಲ್ಲೆಲ್ಲೂ ಭಂಡಾರದ ಧೂಳು, ಕಣ್ಣು ಹಾಯಿಸಿದಲ್ಲೆಲ್ಲ ಜನಸಾಗರ, ಬೆಂಡು-ಬತ್ತಾಸಿನ ಭರ್ಜರಿ ಮಾರಾಟ, ಬೆಲ್ಲದ ಜಿಲೇಬಿ, ಬಿಸಿಬಿಸಿ ಭಜ್ಜಿಯ ಘಮಘಮ, ಪಲ್ಲಕ್ಕಿ ಹೊತ್ತ ಪೂಜಾರಿಗಳು ಹಾಕುತ್ತಿರುವುದು ಕಂಡುಬಂದಿತು.
ಬೇರೆಡೆ ಯಂತೆ ಈ ಜಾತ್ರೆಯಲ್ಲಿ ರಥೋತ್ಸವ ಜರುಗುವುದಿಲ್ಲ. ಬದಲಿಗೆ ಕಬ್ಬಿಣದ ಸರಪಳಿ ಹರಿಯಲಾಗುತ್ತದೆ. ಹಲವು ವೈಶಿಷ್ಟ್ಯಗಳ ಮೈಲಾರಲಿಂಗೇಶ್ವರ ಗುಹಾಂತರ ದೇವಾಲಯಕ್ಕೆ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಸೇರಿ ನೆರೆಯ ಆಂಧ್ರ, ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ಮಲ್ಲಯ್ಯನ ದರ್ಶನ ಪಡೆದು ಪುನೀತರಾದರು.


