ಹೊಸದಿಗಂತ ಡಿಜಿಟಲ್ ಡೆಸ್ಕ್;
ಟೀಂ ಇಂಡಿಯಾ ಸ್ಪಿನ್ನರ್ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ಜೋಡಿ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದ್ದರಿಂದ ಪರಸ್ಪರ ಸಮ್ಮತಿಯ ಮೇರೆಗೆ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಾ ಪಡೆದುಕೊಂಡಿದ್ದರು.
ಇನ್ನು ಯುಜುವೇಂದ್ರ ಚಹಲ್-ಧನಶ್ರೀ ವರ್ಮಾ ವಿವಾಹ ವಿಚ್ಛೇದನಾದ ಬಳಿಕವೂ ಒಬ್ಬರ ಮೇಲೆ ಒಬ್ಬರು ಆರೋಪಗಳನ್ನು ಮಾಡುತ್ತಲೇ ಬಂದಿದ್ದರು. ಅದರಲ್ಲಿ ಯಾರದ್ದೂ ತಪ್ಪು, ಇನ್ಯಾರದ್ದು ಸರಿ ಎಂದು ಫ್ಯಾನ್ಸ್ ತಲೆ ಕೆಡಿಸಿಕೊಳ್ಳುತ್ತಿರುವಾಗಲೇ ಮತ್ತೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಡಿವೋರ್ಸ್ ಬಳಿಕ ಮತ್ತೆ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ರಿಯಾಲಿಟಿ ಶೋನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಅವರ ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿತ್ತು. ಈ ಕುರಿತಂತೆ ಇದೀಗ ಸ್ವತಃ ಯುಜುವೇಂದ್ರ ಚಹಲ್ ಮೊದಲ ಬಾರಿಗೆ ತುಟಿ ಬಿಚ್ಚಿದ್ದಾರೆ.
‘ದಿ 50’ ಎನ್ನುವ ರಿಯಾಲಿಟಿ ಶೋನಲ್ಲಿ ಯುಜುವೇಂದ್ರ ಚಹಲ್ ಕಾಣಿಸಿಕೊಳ್ಳಲಿದ್ದಾರೆ. ಇದೇ ರಿಯಾಲಿಟಿ ಶೋನಲ್ಲಿ ಮಾಜಿ ಪತ್ನಿ ಧನಶ್ರೀ ವರ್ಮಾ ಅವರನ್ನು ಭೇಟಿಯಾಗಲಿದ್ದಾರೆ. ಈ ಜೋಡಿ ರಿಯಾಲಿಟಿ ಶೋ ಮೂಲಕ ಮತ್ತೆ ಒಂದಾಗಲಿದ್ದಾರೆ ಎನ್ನುವಂತ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ಕಾಳ್ಗಿಚ್ಚಿನಂತೆ ಹಬ್ಬಿತ್ತು.
ಈ ಬಗ್ಗೆ ಮಾತನಾಡಿರುವ ಯುಜಿ, ‘ನಾನು ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತೇನೆ ಎನ್ನುವ ಸುದ್ದಿಯಲ್ಲಿ ಯಾವುದೇ ಹುರುಳಿಲ್ಲ. ರಿಪೋರ್ಟ್‌ನಲ್ಲಿ ವರದಿಯಾದ ರಿಯಾಲಿಟಿ ಶೋನಲ್ಲಿ ನಾನು ಭಾಗವಹಿಸುತ್ತಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು’ ಎಂದು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾಗಳಲ್ಲಿ ಯಾವುದೇ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮುನ್ನ ಅದರ ಸತ್ಯಾಸತ್ಯತೆ ತಿಳಿದುಕೊಂಡು ಪೋಸ್ಟ್ ಮಾಡಿ. ಸುಳ್ಳು ಹಾಗೂ ತಪ್ಪಾದ ಮಾಹಿತಿಯನ್ನು ಹರಡಬೇಡಿ ಎಂದು ನೆಟ್ಟಿಗರಲ್ಲಿ ಚಹಲ್ ಮನವಿ ಮಾಡಿಕೊಂಡಿದ್ದಾರೆ.


