ಹೊಸದಿಗಂತ ವರದಿ, ಅಂಕೋಲಾ:
ತಾಲೂಕಿನ ಬೆಳಂಬಾರ ಕಡಲ ತೀರದಲ್ಲಿ ಓಲಿವ್ ರಿಡ್ಲೆ ಪ್ರಭೇದದ ಆಮೆಯ ಕಳೇಬರ ಪತ್ತೆಯಾಗಿದ್ದು ತಲೆಯ ಒಳಭಾಗದಲ್ಲಿ ಆಂತರಿಕ ಗಾಯವಾಗಿರುವ ಕಾರಣದಿಂದ ಆಮೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಪ್ರೌಢಾವಸ್ಥೆಯ ಹಂತದಲ್ಲಿರುವ ಸುಮಾರು 14 ವರ್ಷದ ಹೆಣ್ಣು ಕಡಲಾಮೆಗೆ ಕೆಲವು ದಿನಗಳ ಹಿಂದೆಯೇ ತಲೆಗೆ ಪೆಟ್ಟು ಬಿದ್ದಿರುವ ಸಾಧ್ಯತೆಯಿದ್ದು ಆಂತರಿಕ ಗಾಯದ ಸೋಂಕಿನಿಂದ ಮೃತಪಟ್ಟ ಕಡಲಾಮೆಯ ಮೃತದೇಹ ಬೆಳಂಬಾರ ಸಮೀಪ ಕಡಲ ತೀರದಲ್ಲಿ ಕಡಲ ಅಲೆಗಳೊಂದಿಗೆ ಬಂದು ಬಿದ್ದಿರಬಹುದಾದ ಸಾಧ್ಯತೆ ಇದೆ.
ಅರಣ್ಯ ಇಲಾಖೆಯ ಸಾಗರ ಜೀವಿಗಳ ವಿಭಾಗದ ವಲಯ ಅರಣ್ಯಾಧಿಕಾರಿ ಕಿರಣ್ ಉಪ ವಲಯ ಅರಣ್ಯಾಧಿಕಾರಿ ರಾಜೇಶ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪಶು ವೈದ್ಯರಿಂದ ಆಮೆಯ ಮರಣೋತ್ತರ ಪರೀಕ್ಷೆ ನಡೆಸಿ ಕಡಲ ತೀರದಲ್ಲಿ ಅಂತ್ಯ ಸಂಸ್ಕಾರ ನಡೆಸಿದ್ದಾರೆ.


