January14, 2026
Wednesday, January 14, 2026
spot_img

ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ಮಂಗಳೂರು ವಿಶ್ವವಿದ್ಯಾಲಯಕ್ಕೆ 12 ಪದಕ

ಹೊಸದಿಗಂತ ಡಿಜಿಟಲ್ ಡೆಸ್ಕ್;

ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ ‘85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025-26’ರ ಮೂರನೇ ದಿನವಾದ ಬುಧವಾರ ಕೂಟದ ಏಕೈಕ ಮಿಕ್ಸೆಡ್ (ಪುರುಷ+ಮಹಿಳೆ) ಸ್ಪರ್ಧೆಯಾದ 4*400 ರಿಲೇಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ಪಾರಮ್ಯ ಮೆರೆಯಿತು. ಸಮಗ್ರ ಪದಕ ಪಟ್ಟಿಯಲ್ಲಿ ಮಂಗಳೂರು ವಿ.ವಿ. 74 ಅಂಕಗಳೊoದಿಗೆ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ಈ ಕ್ರೀಡಾಕೂಟದಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಕ್ರೀಡಾ ದತ್ತು ಯೋಜನೆಯ ವಿದ್ಯಾರ್ಥಿಗಳು ಬುಧವಾರ ಮೂರು ಚಿನ್ನ ಹಾಗೂ ಮೂರು ಕಂಚಿನ ಪದಕ ಗೆದ್ದಿದ್ದು, ಈವರೆಗೆ ಒಟ್ಟು 12 ಪದಕ ಜಯಿಸಿದರು.

ಆತಿಥೇಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಭಾಗೀರಥಿ ಬುಧವಾರ ಮುಂಜಾನೆ ನಡೆದ ಹಾಫ್ ಮ್ಯಾರಥಾನ್‌ನಲ್ಲಿ ಚಿನ್ನ ಗೆದ್ದು, ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಂಭ್ರಮ ತಂದರು.

ಚಿನ್ನ ತಂದ ಭಾಗೀರಥಿ:
ಹಾಫ್ ಮ್ಯಾರಥಾನ್‌ನಲ್ಲಿ ಬುಧವಾರ ಮಂಗಳೂರು ವಿಶ್ವವಿದ್ಯಾಲಯಕ್ಕೆ ಚಿನ್ನ ತಂದುಕೊಟ್ಟ ಭಾಗೀರಥಿ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಆಳ್ವಾಸ್ ಕ್ರೀಡಾ ದತ್ತು ಯೋಜನೆಯ ವಿದ್ಯಾರ್ಥಿನಿ.

ಮೂಲತಃ ಉತ್ತಾರಖಂಡ ಚಮೋಲಿ ಜಿಲ್ಲೆಯ ವ್ಯಾನ್ ಹಳ್ಳಿಯ ಭಾಗೀರಥಿ, 2025ರ ಏಪ್ರಿಲ್‌ನಲ್ಲಿ ಇರಾಕ್‌ನಲ್ಲಿ ನಡೆದಿದ್ದ ಆಲ್ ಬಾಸ್ರಾ ಅಂತಾರಾಷ್ಟ್ರೀಯ ಹಾಫ್ ಮ್ಯಾರಥಾನ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ದೆಹಲಿ, ಮುಂಬೈ, ದೆಹಲಿ ಮಾತ್ರವಲ್ಲ ವಿದೇಶದಲ್ಲಿ ನಡೆಯುವ ಮ್ಯಾರಥಾನ್‌ಗಳಲ್ಲೂ ಪಾಲ್ಗೊಂಡಿದ್ದರು. ಕಳೆದ 35 ವರ್ಷಗಳಿಂದ ಮ್ಯಾರಾಥಾನ್‌ನಲ್ಲಿ ಹೆಸರು ಮಾಡುತ್ತಿರುವ ಸುನೀಲ್ ಶರ್ಮಾ ಆಕೆಯ ತರಬೇತುದಾರ.

ಅನನ್ಯ ಬೆಂಬಲದ ಆಳ್ವ:
ಡಿಸ್ಕಸ್ ಥ್ರೋದಲ್ಲಿ ಚಿನ್ನ ಗೆದ್ದ ಉಜ್ವಲ್ ಚೌಧರಿ ಹರಿಯಾಣದ ಹಿಸ್ಸಾರ್‌ನ ಕೃಷಿಕ ರಾಜೀವ್ ಮತ್ತು ಬಬ್ಲಿ ಅವರ ಪುತ್ರ. ಅರವಿಂದ್ ತರಬೇತಿಯಲ್ಲಿ ಪಳಗಿದ ಉಜ್ವಲ್ ಏಷಿಯನ್ ಚಾಂಪಿಯನ್‌ಶಿಪ್ ಗುರಿ ಹೊಂದಿದ್ದಾರೆ. ‘ನನ್ನ ಕನಸು ಹಾಗೂ ಪ್ರಯತ್ನಕ್ಕೆ ಬಲ ನೀಡಿದವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ. ಅವರು ಕ್ರೀಡಾಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುತ್ತಾರೆ. ಆಳ್ವಾಸ್‌ನಲ್ಲಿ ದೊರೆತ ಅತ್ಯುತ್ತಮ ಸೌಲಭ್ಯ ಮತ್ತು ಬೆಂಬಲವೇ ನನ್ನ ಸಾಧನೆಯ ಪ್ರೇರಣೆ’ ಎಂದು ಉಜ್ವಲ್ ಕೃತಜ್ಞತೆ ವ್ಯಕ್ತ ಪಡಿಸಿದರು.

ಇದೇ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ನಾಗೇಂದ್ರ ಅವರು ಭಟ್ಕಳದ ಆಟೋ ಚಾಲಕ ಅಣ್ಣಪ್ಪ ನಾಯ್ಕ ಅವರ ಪುತ್ರ. ಖೇಲೋ ಇಂಡಿಯಾದಲ್ಲಿ ಚಿನ್ನ ಗೆದ್ದಿದ್ದರು. ಭಾರತವನ್ನು ಪ್ರತಿನಿಧಿಸುವುದು ಅವರ ಕನಸು. ‘ನನ್ನ ಏಕಲವ್ಯ ಪ್ರಯತ್ನವನ್ನು ಪೋಷಿಸಿ -ಬೆಳೆಸುತ್ತಿರುವವರು ಡಾ.ಎಂ. ಮೋಹನ ಆಳ್ವ’ ಎಂದು ಧನ್ಯತೆ ವ್ಯಕ್ತಪಡಿಸಿದರು.

ಸರ್ಕಾರಕ್ಕೆ ಧನ್ಯವಾದ:
ದಿನದ ಗಮನ ಸೆಳೆದಿದ್ದ ಪುರುಷರ 400 ಮೀಟರ್ಸ್ ಓಟದ ಚಿನ್ನದ ಪದಕವನ್ನು ಕೊರಳಿಗೇರಿಸಿದ ಚೆನ್ನೆ ಮದ್ರಾಸ್ ವಿಶ್ವವಿದ್ಯಾಲಯದ ಅಜಯ್ ಡಿ., ‘ಸರ್ಕಾರವೇ ಓಟಗಾರರನ್ನು ಗುರುತಿಸಿ, ಚೆನ್ನೆ ನೆಹರೂ ಕ್ರೀಡಾಂಗಣದಲ್ಲಿ ತರಬೇತಿ ನೀಡಿದ ಪರಿಣಾಮ, ಗಾಯಗೊಂಡಿದ್ದ ನಾನೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಯಿತು. ಅಪ್ಪ, ತರಬೇತುದಾರ ಪ್ರೇಮಾನಂದ ಹಾಗೂ ಸರ್ಕಾರಕ್ಕೆ ಕೃತಜ್ಞತೆಗಳು’ ಎಂದರು.

ಕಾರು ಚಾಲಕ ದಕ್ಷಿಣಾಮೂರ್ತಿಯ ಪುತ್ರ ಎಳವೆಯಲ್ಲಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದಾರೆ. ಅವರು ಚೆನ್ನೆ ಲೊಯಲಾ ಕಾಲೇಜಿನ ವಿದ್ಯಾರ್ಥಿ.

400 ಮೀಟರ್ಸ್ ಓಟದ ಮಹಿಳಾ ವಿಭಾಗದ ಚಿನ್ನ ಗೆದ್ದ ಚಂಡೀಗಢ ವಿಶ್ವವಿದ್ಯಾಲಯದ ಎಂ.ಎ. ಯೋಗ ವಿದ್ಯಾರ್ಥಿನಿ ಪ್ರಿಯಾ ಠಾಕೂರ್, ‘ನಾನು ನನ್ನ ಜೊತೆ ಸ್ಪರ್ಧಿಸುತ್ತೇನೆ. ಜೊತೆಗಾರರೆಲ್ಲ ನನ್ನ ಗೆಳತಿಯರು. ಚಿನ್ನಕ್ಕಿಂತ ಸಮಯ ಉತ್ತಮ ಪಡಿಸುವುದು ಮುಖ್ಯ’ ಎಂದು ಮುಗುಳ್ನಕ್ಕರು.

ಹಿಮಾಚಲ ಪ್ರದೇಶದ ಅಮೀರ್‌ಪುರ್ ಕಂಗಾಡದ 24 ವರ್ಷದ ಪ್ರಿಯಾ, ಕೃಷಿಕರಾದ ದೇಸ್‌ರಾಜ್ ಮತ್ತು ಮಾಯಾದೇವಿ ದಂಪತಿ ಪುತ್ರಿ. ಅನಿಲ್ ಕುಮಾರ್ ತರಬೇತಿಯಲ್ಲಿ ಪಳಗಿದ್ದಾರೆ. ಕೊಕ್ಕೋ ಆಟಗಾರರಾಗಿದ್ದ ಅವರು, 100 ಮೀ. ಓಟಗಾರರಾಗಿ ಅಥ್ಲೆಟಿಕ್ಸ್ ಪ್ರೇವೇಶಿಸಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ತಂಡವು 4*400 ಮೀಟರ್ಸ್ನಲ್ಲಿ ಮಿಂಚುತ್ತಿರುವ ಕಾರಣ ನಾನು 400 ಮೀಟರ್ಸ್ ಓಟಕ್ಕೆ ಬಂದೆ. ಏಷಿಯನ್ ಹಾಗೂ ಒಲಿಂಪಿಯನ್ ನನ್ನ ಕನಸು’ ಎಂದರು.

Most Read

error: Content is protected !!