ಹೊಸದಿಗಂತ ಡಿಜಿಟಲ್ ಡೆಸ್ಕ್;
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲ್ಯಾಂಡ್ ತಂಡ 7 ವಿಕೆಟ್ಗಳ ಸುಲಭ ಗೆಲುವು ಸಾಧಿಸಿದೆ.
ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ನಿಗದಿತ 50 ಓವರ್‌ಗಳಲ್ಲಿ ಏಳು ವಿಕೆಟ್‌ಗಳಿಗೆ 284 ರನ್ ಗಳಿಸಿತು. ಭಾರತ ನೀಡಿದ್ದ 285 ರನ್‌ಗಳ ಗುರಿಯನ್ನು ಕಿವೀಸ್ ಪಡೆ ಕೇವಲ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ.
285 ರನ್‌ಗಳ ಗುರಿಯನ್ನ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ನಿಧಾನಗತಿ ಆರಂಭ ಪಡೆದುಕೊಂಡಿತು. ಕೇವಲ 22 ರನ್ಗಳಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಡಿವೋನ್ ಕಾನ್ವೆ 21 ಎಸೆತಗಳಲ್ಲಿ 16 ರನ್ಗಳಿಸಿ ಹರ್ಷಿತ್ ರಾಣಾ ಬೌಲಿಂಗ್ನಲ್ಲಿ ಬೌಲ್ಡ್ ಆದರು. ಮತ್ತೊಬ್ಬ ಆರಂಭಿಕ ಹೆನ್ರಿ ನಿಕೋಲ್ಸ್ ಕೂಡ ಕೇವಲ 10 ರನ್ಗಳಿಸಿ ಪ್ರಸಿದ್ಧ್ ಕೃಷ್ಣಾಗೆ ವಿಕೆಟ್ ಒಪ್ಪಿಸಿದರು.
ಆದರೆ 3ನೇ ವಿಕೆಟ್ಗೆ ಒಂದಾದ ವಿಲ್ ಯಂಗ್ ಹಾಗೂ ಡ್ಯಾರಿಲ್ ಮಿಚೆಲ್ ನಿಧಾನವಾಗಿ ಇನ್ನಿಂಗ್ಸ್ ಕಟ್ಟುತ್ತಾ ಭಾರತದಿಂದ ಗೆಲುವನ್ನ ಕಸಿದುಕೊಂಡರು. ಈ ಜೋಡಿ 3ನೇ ವಿಕೆಟ್ಗೆ 162 ರನ್‌ಗಳ ಮ್ಯಾಚ್ ವಿನ್ನಿಂಗ್ ಜೊತೆಯಾಟ ನೀಡಿದರು.
ಯಂಗ್ 98 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ 87 ರನ್ಗಳಿಸಿದರು. ನಂತರ 5ನೇ ಕ್ರಮಾಂಕದಲ್ಲಿ ಬಂದ ಗ್ಲೆನ್ ಫಿಲಿಪ್ಸ್ ಮಿಚೆಲ್ ಜೊತೆಗೂಡಿ 4ನೇ ವಿಕೆಟ್ ಜೊತೆಯಾಟದಲ್ಲಿ ಅಜೇಯ 78 ರನ್‌ಗಳ ಜೊತೆಯಾಟ ನಡೆಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು. ಫಿಲಿಫ್ಸ್ 25 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 32 ರನ್ಗಳಿಸಿದರು.
ಕಳೆದ ಪಂದ್ಯದಲ್ಲಿ 84 ರನ್ ಸಿಡಿಸಿದ್ದ ಮಿಚೆಲ್ ಈ ಪಂದ್ಯದಲ್ಲೂ ಅದೇ ಫಾರ್ಮ್ ಮುಂದುವರಿಸಿ ಅಜೇಯ ಶತಕ ಸಿಡಿಸಿದರು. 117 ಎಸೆತಗಳನ್ನೆದುರಿಸಿದ ಮಿಚೆಲ್ 11 ಬೌಂಡರಿ, 2 ಸಿಕ್ಸರ್ಗಳ ಸಹಿತ ಅಜೇಯ 131 ರನ್ಗಳಿಸಿದರು.


