ಹೊಸದಿಗಂತ ಡಿಜಿಟಲ್ ಡೆಸ್ಕ್:
ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ದಾಖಲಿಸಿ ನಿರ್ಮಾಪಕರಿಗೆ ದೊಡ್ಡ ಲಾಭ ತಂದಿದೆ. ಈ ಯಶಸ್ಸಿನ ಬೆನ್ನಲ್ಲೇ ‘ಧುರಂಧರ್ 2’ ಚಿತ್ರವೂ ಘೋಷಣೆಯಾಗಿದ್ದು, ಮಾರ್ಚ್ 19ರಂದು ಬಿಡುಗಡೆ ಮಾಡುವುದಾಗಿ ತಿಳಿಸಲಾಗಿತ್ತು. ಆದರೆ ಇದೀಗ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲಾಗುತ್ತದೆ ಎಂಬ ಸುದ್ದಿ ಸಿನಿ ವಲಯದಲ್ಲಿ ಚರ್ಚೆಯಾಗುತ್ತಿದೆ.
ವಿಶೇಷವೆಂದರೆ ಇದೇ ದಿನ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯಾಗಬೇಕಿದೆ. ಎರಡು ದೊಡ್ಡ ಸಿನಿಮಾಗಳು ಒಂದೇ ದಿನ ಬಿಡುಗಡೆಯಾದರೆ ಬಾಕ್ಸ್ ಆಫೀಸ್‌ನಲ್ಲಿ ತೀವ್ರ ಪೈಪೋಟಿ ಉಂಟಾಗಲಿದೆ ಎಂಬ ಲೆಕ್ಕಾಚಾರ ಮೊದಲಿನಿಂದಲೂ ಇತ್ತು. ಈಗ ‘ಧುರಂಧರ್ 2’ ಬಿಡುಗಡೆ ಮುಂದಕ್ಕೆ ಸರಿಯುವ ಸಾಧ್ಯತೆ ಇರುವುದರಿಂದ ಆ ಕ್ಲ್ಯಾಷ್ ತಪ್ಪುವ ಲಕ್ಷಣಗಳು ಕಾಣಿಸುತ್ತಿವೆ.
ಮೂಲಗಳ ಪ್ರಕಾರ, ಮೊದಲ ಭಾಗದ ಅಪಾರ ಯಶಸ್ಸಿನ ಕಾರಣ ‘ಧುರಂಧರ್ 2’ ಸಿನಿಮಾವನ್ನು ಇನ್ನಷ್ಟು ಅದ್ಧೂರಿಯಾಗಿ ರೂಪಿಸಲು ನಿರ್ದೇಶಕ ಆದಿತ್ಯ ಧರ್ ನಿರ್ಧರಿಸಿದ್ದಾರೆ. ಕೆಲ ಪ್ರಮುಖ ದೃಶ್ಯಗಳನ್ನು ವಿಸ್ತರಿಸುವುದು, ಹೊಸ ಆಕ್ಷನ್ ಸೀಕ್ವೆನ್ಸ್‌ಗಳನ್ನು ಸೇರಿಸುವುದು ಸೇರಿದಂತೆ ಚಿತ್ರಕ್ಕೆ ಹೆಚ್ಚಿನ ಗುಣಮಟ್ಟ ನೀಡುವ ಕೆಲಸ ನಡೆಯುತ್ತಿದೆ. ಇದರಿಂದ ಚಿತ್ರೀಕರಣಕ್ಕೆ ಹೆಚ್ಚುವರಿ ಸಮಯ ಬೇಕಾಗುತ್ತಿದ್ದು, ಸಹಜವಾಗಿ ಬಿಡುಗಡೆ ತಡವಾಗಲಿದೆ ಎನ್ನಲಾಗುತ್ತಿದೆ.
ಇನ್ನೊಂದು ಪ್ರಮುಖ ಅಂಶವೆಂದರೆ, ಮೊದಲ ಭಾಗದಲ್ಲಿ ಪ್ರೇಕ್ಷಕರ ಗಮನ ಸೆಳೆದ ಅಕ್ಷಯ್ ಖನ್ನ ಅವರ ಪಾತ್ರವನ್ನು ಮುಂದುವರೆಸಲಾಗುತ್ತಿದೆ. ಅವರ ಪಾತ್ರದ ಹಿನ್ನೆಲೆಗೆ ಹೆಚ್ಚಿನ ಮಹತ್ವ ನೀಡಲು ವಿಶೇಷ ದೃಶ್ಯಗಳನ್ನು ಚಿತ್ರಿಸುವ ಯೋಜನೆ ಇದೆ ಎನ್ನಲಾಗಿದೆ. ಒಟ್ಟಿನಲ್ಲಿ, ‘ಧುರಂಧರ್ 2’ ಬಿಡುಗಡೆ ಮುಂದೂಡಿದರೆ ಅದು ‘ಟಾಕ್ಸಿಕ್’ ಹಾಗೂ ‘ಧುರಂಧರ್’ ಎರಡೂ ಸಿನಿಮಾಗಳಿಗೂ ಲಾಭಕರವಾಗಲಿದೆ ಎಂಬ ಅಭಿಪ್ರಾಯ ಸಿನಿಪ್ರೇಮಿಗಳಲ್ಲಿ ವ್ಯಕ್ತವಾಗಿದೆ.


