January15, 2026
Thursday, January 15, 2026
spot_img

ಇರಾನ್‌ನಲ್ಲಿ ಹತ್ಯೆಗಳು ಕಡಿಮೆಯಾಗಿದೆ, ಎಲ್ಲಾ ಅಂಡರ್ ಕಂಟ್ರೋಲ್ ನಲ್ಲಿದೆ ಎಂದ ಟ್ರಂಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್‌ನಲ್ಲಿ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆಗಳು ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಹೇಳಿಕೆಯನ್ನು ನೀಡಿದ್ದಾರೆ.

ಪ್ರತಿಭಟನೆಗಳಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ವರದಿಗಳ ನಡುವೆಯೇ, “ಇರಾನ್‌ನಲ್ಲಿ ಹತ್ಯೆಗಳು ನಿಲ್ಲುತ್ತಿವೆ, ಮರಣದಂಡನೆಗೆ ಸದ್ಯ ಯಾವುದೇ ಯೋಜನೆ ಇಲ್ಲ” ಎಂದು ಟ್ರಂಪ್ ಹೇಳಿದ್ದಾರೆ. ಈ ಮಾಹಿತಿ ಉತ್ತಮ ಅಧಿಕಾರ ಮೂಲಗಳಿಂದ ದೊರೆತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದರಿಂದ ಅಮೆರಿಕ–ಇರಾನ್ ನಡುವಿನ ಉದ್ವಿಗ್ನತೆಯ ನಡುವೆ ಸ್ವಲ್ಪ ಮಟ್ಟಿನ ನಿರಾಳತೆಯ ವಾತಾವರಣ ಮೂಡಿದೆ.

ನಾರ್ವೆ ಮೂಲದ ಇರಾನ್ ಮಾನವ ಹಕ್ಕುಗಳ ಸಂಸ್ಥೆಯ ಪ್ರಕಾರ, ಭದ್ರತಾ ಪಡೆಗಳ ದಮನದಲ್ಲಿ 3,400ಕ್ಕೂ ಹೆಚ್ಚು ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ. ಇನ್ನೊಂದು ಅಮೆರಿಕ ಮೂಲದ ಸಂಸ್ಥೆ ಸುಮಾರು 2,500ಕ್ಕೂ ಹೆಚ್ಚು ಸಾವುಗಳನ್ನು ವರದಿ ಮಾಡಿದ್ದು, ನಿಜವಾದ ಸಂಖ್ಯೆ ಇದಕ್ಕಿಂತ ಹೆಚ್ಚಿನದಾಗಿರಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ. ಇದಲ್ಲದೆ ಸಾವಿರಾರು ಮಂದಿ ಬಂಧನಕ್ಕೆ ಒಳಗಾಗಿದ್ದಾರೆ.

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಕೂಡ ಗಲ್ಲಿಗೇರಿಸುವ ಬಗ್ಗೆ ಯಾವುದೇ ತಕ್ಷಣದ ಯೋಜನೆ ಇಲ್ಲ ಎಂದು ಹೇಳಿದ್ದಾರೆ. ದೇಶದಲ್ಲಿ ಪರಿಸ್ಥಿತಿ ಈಗ ನಿಯಂತ್ರಣದಲ್ಲಿ ಇದೆ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಕೆಲವು ಮಿಲಿಟರಿ ನೆಲೆಗಳಿಂದ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳಲು ಆರಂಭಿಸಿದೆ.

ಈ ಬೆಳವಣಿಗೆಗಳ ನಡುವೆ, ಭಾರತವೂ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದು, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇರಾನ್ ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸಿದ್ದಾರೆ. ಇರಾನ್ ಪರಿಸ್ಥಿತಿ ಶಾಂತವಾಗುತ್ತದೆಯೇ ಅಥವಾ ಮತ್ತಷ್ಟು ಗಂಭೀರವಾಗುತ್ತದೆಯೇ ಎನ್ನುವುದನ್ನು ಜಗತ್ತು ಕಾದು ನೋಡುತ್ತಿದೆ.

Most Read

error: Content is protected !!