January15, 2026
Thursday, January 15, 2026
spot_img

ರಣಜಿ ಟೂರ್ನಿಯಲ್ಲಿ ಹೊಸ ಅಧ್ಯಾಯ: ಸಿರಾಜ್ ಕೈ ಹಿಡಿದ ಕ್ಯಾಪ್ಟನ್ಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡದ ಭಾಗವಾಗಿರುವ ವೇಗಿ ಮೊಹಮ್ಮದ್ ಸಿರಾಜ್‌ಗೆ ಇದೀಗ ದೇಶೀಯ ಕ್ರಿಕೆಟ್‌ನಲ್ಲಿ ಮಹತ್ವದ ಜವಾಬ್ದಾರಿ ಲಭಿಸಿದೆ. ಸಿರಾಜ್‌ಗೆ ರಣಜಿ ಟ್ರೋಫಿಯಲ್ಲಿ ನಾಯಕತ್ವದ ಜವಾಬ್ದಾರಿ ಒಪ್ಪಿಸಲಾಗಿದೆ. ಜನವರಿ 22ರಿಂದ ಆರಂಭವಾಗಲಿರುವ ರಣಜಿ ಟೂರ್ನಿಯ ದ್ವಿತೀಯ ಸುತ್ತಿನ ಪಂದ್ಯಗಳಿಗೆ ಹೈದರಾಬಾದ್ ತಂಡವನ್ನು ಪ್ರಕಟಿಸಲಾಗಿದ್ದು, ಈ ಬಾರಿ ತಂಡವನ್ನು ಸಿರಾಜ್ ಮುನ್ನಡೆಸಲಿದ್ದಾರೆ. ಇದು ಅವರ ಕ್ರಿಕೆಟ್ ಜೀವನದಲ್ಲೇ ಮೊದಲ ನಾಯಕತ್ವದ ಅನುಭವವಾಗಲಿದೆ.

ಇದುವರೆಗೆ ಹೈದರಾಬಾದ್ ತಂಡವನ್ನು ರಾಹುಲ್ ಸಿಂಗ್ ನಾಯಕತ್ವ ವಹಿಸಿಕೊಂಡಿದ್ದರು. ಆದರೆ ಸತತ ಸೋಲುಗಳಿಂದ ತಂಡದ ಪ್ರದರ್ಶನ ಕುಸಿದಿದ್ದರಿಂದ ನಿರ್ವಹಣಾ ಮಂಡಳಿ ಹೊಸ ನಿರ್ಧಾರ ಕೈಗೊಂಡಿದೆ. ತಂಡಕ್ಕೆ ಹೊಸ ದಿಕ್ಕು ನೀಡುವ ಉದ್ದೇಶದಿಂದ ಸಿರಾಜ್ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಪ್ರಸ್ತುತ ರಣಜಿ ಸೀಸನ್‌ನಲ್ಲಿ ಹೈದರಾಬಾದ್ ತಂಡ ಆಡಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋಲು ಕಂಡಿದ್ದು, ಕೇವಲ ಒಂದೇ ಗೆಲುವು ದಾಖಲಿಸಿದೆ. ಇದರ ಪರಿಣಾಮವಾಗಿ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇಂತಹ ಸಂದರ್ಭದಲ್ಲಿ ನಾಯಕತ್ವದ ಬದಲಾವಣೆ ತಂಡದ ಮನೋಬಲ ಹೆಚ್ಚಿಸಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಅನುಭವಿ ವೇಗದ ಬೌಲರ್ ಆಗಿರುವ ಸಿರಾಜ್ ಅವರ ಹೋರಾಟ ಮನೋಭಾವ ಮತ್ತು ಶಿಸ್ತು ತಂಡಕ್ಕೆ ಬಲ ತುಂಬಲಿದೆ ಎಂಬ ವಿಶ್ವಾಸ ಕ್ರಿಕೆಟ್ ವಲಯದಲ್ಲಿ ವ್ಯಕ್ತವಾಗಿದೆ. ಅವರ ಮಾರ್ಗದರ್ಶನದಲ್ಲಿ ಹೈದರಾಬಾದ್ ತಂಡ ರಣಜಿ ಟ್ರೋಫಿಯಲ್ಲಿ ಪುನಶ್ಚೇತನ ಸಾಧಿಸಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ.

Most Read

error: Content is protected !!