ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದ ಫತೇಪುರ್ ಶೇಖಾವತಿಯ ರಾಷ್ಟ್ರೀಯ ಹೆದ್ದಾರಿ–52ರ ಹರ್ಸಾವಾ ಗ್ರಾಮದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಮಾಹಿತಿಯಂತೆ, ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಗ್ರಾಮಕ್ಕೆ ಮರಳುತ್ತಿದ್ದ ಕಾರು ಅತಿ ವೇಗದಲ್ಲಿ ಸಾಗುತ್ತಿದ್ದಾಗ ಓವರ್‌ಟೇಕ್ ಮಾಡಲು ಪ್ರಯತ್ನಿಸಿದೆ. ಆಗ ನಿಯಂತ್ರಣ ತಪ್ಪಿದ ಕಾರು ಮೊದಲು ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದು, ನಂತರ ಎದುರಿನಿಂದ ಬರುತ್ತಿದ್ದ ಟ್ರಕ್‌ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿ, ಅದರೊಳಗಿದ್ದ ಮಹಿಳೆಯರಿಗೆ ಬದುಕುಳಿಯುವ ಅವಕಾಶವೇ ದೊರಕಲಿಲ್ಲ. ಅತ್ತೆ, ಐವರು ಸೊಸೆಯಂದಿರು ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟರು. ಕಾರು ಚಾಲಕ ಹಾಗೂ ಇನ್ನೊಬ್ಬ ಯುವತಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರೆಲ್ಲರೂ ರಘುನಾಥಪುರ ಗ್ರಾಮದ ಒಂದೇ ಕುಟುಂಬಕ್ಕೆ ಸೇರಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಆಡಳಿತಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ದುರಂತದ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


