ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಸಿನಿರಂಗದಲ್ಲಿ ಭಾರೀ ಸಂಚಲನ ಮೂಡಿಸಿದ್ದ ‘ಕಾಂತಾರ ಚಾಪ್ಟರ್ 1’ ಈಗ ಮನೆಮನೆ ತಲುಪಲು ಸಜ್ಜಾಗಿದೆ. ಕಳೆದ ವರ್ಷ ಚಿತ್ರಮಂದಿರಗಳಲ್ಲಿ ದಾಖಲೆ ಸೃಷ್ಟಿಸಿ, ಬಳಿಕ ಓಟಿಟಿಯಲ್ಲೂ ಯಶಸ್ವಿ ಪ್ರದರ್ಶನ ಕಂಡ ಈ ಸೂಪರ್ ಹಿಟ್ ಸಿನಿಮಾ ಇದೀಗ ಟೆಲಿವಿಷನ್ ಪ್ರೇಕ್ಷಕರ ಮುಂದೆ ಬರಲಿದೆ. ಜೀ ಕನ್ನಡ ವಾಹಿನಿಯಲ್ಲಿ ‘ಕಾಂತಾರ ಚಾಪ್ಟರ್ 1’ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಶೀಘ್ರದಲ್ಲೇ ನಡೆಯಲಿದೆ.
ಜೀ ಕನ್ನಡ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಪ್ರೋಮೋ ಬಿಡುಗಡೆ ಮಾಡಿದ್ದು, ಅದಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಕಡಿಮೆ ಅವಧಿಯ ಈ ಪ್ರೋಮೋದಲ್ಲೇ ಚಿತ್ರದ ಕಥಾ ಸಾರ, ದೃಶ್ಯ ವೈಭವ ಮತ್ತು ಭಾವನಾತ್ಮಕ ಅಂಶಗಳನ್ನು ಹಿಡಿದಿಟ್ಟಿರುವುದು ಗಮನ ಸೆಳೆಯುತ್ತಿದೆ. ಆದರೆ, ಪ್ರಸಾರದ ನಿಖರ ದಿನಾಂಕವನ್ನು ವಾಹಿನಿ ಇನ್ನೂ ಪ್ರಕಟಿಸಿಲ್ಲ. “ಅತಿ ಶೀಘ್ರದಲ್ಲೇ” ಎಂಬ ಸೂಚನೆ ಮಾತ್ರ ನೀಡಲಾಗಿದೆ.
ಅಕ್ಟೋಬರ್ 2ರಂದು ಬಿಡುಗಡೆಯಾದ ‘ಕಾಂತಾರ ಚಾಪ್ಟರ್ 1’ ದೇಶಾದ್ಯಂತ ಸಾವಿರಾರು ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಂಡು ಭರ್ಜರಿ ಆರಂಭ ಪಡೆದುಕೊಂಡಿತ್ತು. ಬಾಕ್ಸ್ ಆಫೀಸ್‌ನಲ್ಲಿ ಸುಮಾರು 850 ಕೋಟಿ ರೂಪಾಯಿ ಗಳಿಸುವ ಮೂಲಕ 2025ರ ಟಾಪ್-10 ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪಟ್ಟಿಗೆ ಸೇರಿದೆ.
ರಿಷಬ್ ಶೆಟ್ಟಿ ನಿರ್ದೇಶಿಸಿ, ನಾಯಕನಾಗಿಯೂ ಅಭಿನಯಿಸಿರುವ ಈ ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಗುಲ್ಶನ್ ದೇವಯ್ಯ ಅವರ ಪಾತ್ರವೂ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿತ್ತು. ಇದೀಗ ಟಿವಿ ಪ್ರೀಮಿಯರ್ ಮೂಲಕ ‘ಕಾಂತಾರ’ ಕ್ರೇಜ್ ಮತ್ತೆ ಹೊಸ ಹಂತಕ್ಕೆ ತಲುಪುವ ನಿರೀಕ್ಷೆಯಿದೆ.


