January15, 2026
Thursday, January 15, 2026
spot_img

ಸೈಟ್ ಒತ್ತುವರಿ ಪ್ರಕರಣ: ಯಶ್ ತಾಯಿ ಪುಷ್ಪಕ್ಕನಿಗೆ ಕೋರ್ಟ್‌ನಲ್ಲಿ ಹಿನ್ನಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಯಶ್ ಅವರ ತಾಯಿ ಪುಷ್ಪ ಅವರಿಗೆ ಸಂಬಂಧಿಸಿದಂತೆ ಕೇಳಿಬಂದಿದ್ದ ಹಾಸನದ ಸೈಟ್ ವಿವಾದ ಪ್ರಕರಣದಲ್ಲಿ ಇದೀಗ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಸೈಟ್‌ಗೆ ಹಾಕಲಾಗಿದ್ದ ಕಾಂಪೌಂಡ್ ಒಡೆದುಹಾಕಿದ ವಿಚಾರದಲ್ಲಿ ದೇವರಾಜ್ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಲು ನಿರಾಕರಿಸಿದೆ.

ಹಾಸನದ ನಾಲ್ಕನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪುಷ್ಪ ಹಾಗೂ ನಟರಾಜ್ ಅವರು ದೇವರಾಜ್ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಸೈಟ್ ಸಂಬಂಧ ಈ ಹಿಂದೆ ನೀಡಲಾಗಿದ್ದ ಆದೇಶಕ್ಕೆ ತಡೆ ನೀಡಬೇಕು ಹಾಗೂ ದೇವರಾಜ್‌ಗೆ ನೋಟಿಸ್ ನೀಡುವ ಮೊದಲು ಪ್ರತಿಬಂಧಕಾಜ್ಞೆ ಜಾರಿಗೊಳಿಸಬೇಕು ಎಂದು ಅವರು ಕೋರಿದ್ದರು. ಆದರೆ ನ್ಯಾಯಾಲಯ ಈ ಬೇಡಿಕೆಯನ್ನು ತಿರಸ್ಕರಿಸಿದೆ.

ಪುಷ್ಪ ಅವರ ವಾದದಂತೆ, ವಿದ್ಯಾನಗರದ ಸರ್ವೆ ನಂಬರ್ 90ರಲ್ಲಿ ಇರುವ 125×45 ಅಡಿ ಅಳತೆಯ ಸೈಟ್‌ನ್ನು ಅವರು ಗಿರೀಶ್ ಎಂಬವರಿಂದ ಖರೀದಿಸಿದ್ದರು. ಆ ಜಾಗದ ಸುರಕ್ಷತೆಗೆ ಕಾಂಪೌಂಡ್ ಹಾಕಲಾಗಿತ್ತು. ಆದರೆ ದೇವರಾಜ್ ಜೆಸಿಬಿ ಮೂಲಕ ಅದನ್ನು ಅಕ್ರಮವಾಗಿ ಒಡೆದು, ಜಾಗವನ್ನು ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಯಶ್ ಅವರ ಹೆಸರಿಗೆ ಧಕ್ಕೆ ತರುವ ಉದ್ದೇಶವಿದೆ ಎಂದೂ ಪುಷ್ಪ ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ದೇವರಾಜ್, ಮೈಸೂರಿನ ಲಕ್ಷ್ಮಮ್ಮರಿಂದ ಜಿಪಿಎ ಮೂಲಕ ಸೈಟ್ ಪಡೆದಿದ್ದು, ನ್ಯಾಯಾಲಯದ ಆದೇಶದಂತೆ ಕಾಂಪೌಂಡ್ ತೆರವುಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಪುಷ್ಪ ಕಡೆಯಿಂದ ಜೀವ ಬೆದರಿಕೆ ಇದೆ ಎಂದೂ ದೂರಿದ್ದಾರೆ.

ನ್ಯಾಯಾಲಯವು ದೇವರಾಜ್‌ಗೆ ನೋಟಿಸ್ ಜಾರಿ ಮಾಡಿದ್ದು, ಜನವರಿ 31ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಪ್ರಕರಣದ ಮುಂದಿನ ಹಂತದ ಮೇಲೆ ಈಗ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

Most Read

error: Content is protected !!