January15, 2026
Thursday, January 15, 2026
spot_img

Viral | ‘ಇಂಡಿಯಾ ಕೆಲವು ವಿಷಯಗಳಲ್ಲಿ ಫ್ರಾನ್ಸ್‌ಗಿಂತ ಮುಂದಿದೆ’: ಫ್ರೆಂಚ್ ಮಹಿಳೆಯ ಬಾಯಲ್ಲಿ ಭಾರತದ ಗುಣಗಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಲಸದ ನಿಮಿತ್ತ ಭಾರತಕ್ಕೆ ಬಂದಿರುವ ಫ್ರೆಂಚ್ ಮಹಿಳೆಯೊಬ್ಬರು, ಭಾರತ ಕೆಲವು ಕ್ಷೇತ್ರಗಳಲ್ಲಿ ಫ್ರಾನ್ಸ್‌ಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಫ್ರೆಲ್ಡಾವೇ ಎಂಬ ಖಾತೆಯಿಂದ ಹಂಚಿಕೊಳ್ಳಲಾದ ಈ ವಿಡಿಯೋ, ಭಾರತೀಯ ದೈನಂದಿನ ಜೀವನದ ಬಗ್ಗೆ ಆಕೆಯ ಪ್ರಾಮಾಣಿಕ ಅವಲೋಕನಕ್ಕೆ ಮೆಚ್ಚುಗೆ ಗಳಿಸಿದೆ.

ವಿಡಿಯೋದಲ್ಲಿ ಮಾತನಾಡಿರುವ ಮಹಿಳೆ, ಭಾರತದಲ್ಲಿ ಆಹಾರ ಸಂಸ್ಕೃತಿ ಅತ್ಯಂತ ವೈವಿಧ್ಯಮಯ ಮತ್ತು ಕೈಗೆಟುಕುವಂತಿದೆ ಎಂದು ಹೇಳಿದ್ದಾರೆ. ಬೀದಿ ಆಹಾರ ಕೇವಲ ರುಚಿಯ ವಿಷಯವಲ್ಲ, ಅದು ಜನರೊಂದಿಗೆ ಬೆರೆಯುವ ಸಂಸ್ಕೃತಿಯೂ ಹೌದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಭಾರತೀಯ ಆಭರಣಗಳ ದಿಟ್ಟ ಹಾಗೂ ಬಣ್ಣಬಣ್ಣದ ಶೈಲಿ ತನ್ನನ್ನು ಆಕರ್ಷಿಸಿದೆ ಎಂದು ತಿಳಿಸಿದ್ದಾರೆ.

ಭಾರತದ ದೀರ್ಘದೂರ ಪ್ರಯಾಣ ವ್ಯವಸ್ಥೆಯನ್ನೂ ಅವರು ಶ್ಲಾಘಿಸಿದ್ದಾರೆ. ಸ್ಲೀಪರ್ ಬಸ್‌ಗಳು ಮತ್ತು ರೈಲು ಪ್ರಯಾಣಗಳು ಆರಾಮದಾಯಕವಾಗಿದ್ದು, ರಸ್ತೆ ಹಾಗೂ ರೈಲು ಮೂಲಕ ಪ್ರಯಾಣಿಸುವುದರಿಂದ ದೇಶದ ಸೌಂದರ್ಯವನ್ನು ಅನುಭವಿಸಬಹುದು ಎಂದು ಹೇಳಿದ್ದಾರೆ. ಕೂದಲಿನ ಆರೈಕೆ ವಿಷಯದಲ್ಲೂ ಭಾರತ ವಿಭಿನ್ನವಾಗಿದೆ ಎಂದು ಹೇಳಿರುವ ಅವರು, ಎಣ್ಣೆ ಬಳಕೆ ಮತ್ತು ಪಾರಂಪರಿಕ ವಿಧಾನಗಳು ಗಮನಸೆಳೆದಿವೆ ಎಂದಿದ್ದಾರೆ.

ಅತ್ಯಂತ ಮುಖ್ಯವಾಗಿ, ಭಾರತೀಯರ ಆತಿಥ್ಯ ಮತ್ತು ಆತ್ಮೀಯತೆ ತನ್ನನ್ನು ಆಳವಾಗಿ ಸ್ಪರ್ಶಿಸಿದೆ ಎಂದ ಅವರು, ಮನೆಗಳಿಗೆ ಆಹ್ವಾನ, ಆಹಾರದ ಹಂಚಿಕೆ ಮತ್ತು ಸಂಸ್ಕೃತಿಗಳ ವಿನಿಮಯದಿಂದ ತನಗೆ ಸದಾ ಸ್ವಾಗತ ಕೋರಿದ್ದಾರೆ ಎಂಬ ಭಾವನೆ ಉಂಟಾಗಿದೆ ಎಂದು ತಿಳಿಸಿದ್ದಾರೆ.

ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಅನೇಕ ಬಳಕೆದಾರರು, ಆಕೆಯ ಪ್ರಾಮಾಣಿಕತೆ ಮತ್ತು ಭಾರತೀಯ ಸಂಸ್ಕೃತಿಯನ್ನು ಗೌರವಿಸಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಕ್ಲಿಪ್ ಇದೀಗ ವ್ಯಾಪಕವಾಗಿ ವೈರಲ್ ಆಗಿದೆ.

Most Read

error: Content is protected !!