ಹೊಸದಿಗಂತ ಡಿಜಿಟಲ್ ಡೆಸ್ಕ್:
ಖಾಸಗಿ ಶಾಲೆಗಳ ಪೈಪೋಟಿ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಪ್ರತಿವರ್ಷ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಒಂದೇ ವರ್ಷದಲ್ಲಿ ದಾಖಲಾತಿ ಸಂಖ್ಯೆಯಲ್ಲಿ 2.25 ಲಕ್ಷದಷ್ಟು ಭಾರಿ ಇಳಿಕೆ ಕಂಡಿರುವುದು ಶಿಕ್ಷಣ ಇಲಾಖೆಯನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರಿ ಶಾಲೆಗಳತ್ತ ಪೋಷಕರನ್ನು ಮತ್ತು ಮಕ್ಕಳನ್ನು ಆಕರ್ಷಿಸಲು ಇಲಾಖೆಯು ಹೊಸ ‘ಮಾಸ್ಟರ್ ಪ್ಲ್ಯಾನ್’ ರೂಪಿಸಿದೆ.
ಈಗಾಗಲೇ ನೀಡಲಾಗುತ್ತಿರುವ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂ ಹಾಗೂ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಇಲಾಖೆಯು ಈ ಕೆಳಗಿನ ಸೌಲಭ್ಯಗಳನ್ನು ಘೋಷಿಸಿದೆ:
ಪ್ರತಿ ವಿದ್ಯಾರ್ಥಿಗೆ ಉಚಿತವಾಗಿ 6 ನೋಟ್ ಪುಸ್ತಕಗಳನ್ನು ನೀಡಲು ನಿರ್ಧರಿಸಲಾಗಿದೆ.
ಮಕ್ಕಳ ಪೌಷ್ಟಿಕಾಂಶ ಹೆಚ್ಚಿಸಲು ವಾರದ ಐದು ದಿನಗಳ ಕಾಲ ಮೊಟ್ಟೆ ವಿತರಣೆ ಮಾಡಲಾಗುವುದು.
ಜನವರಿಯಿಂದಲೇ ದಾಖಲಾತಿ ಪ್ರಕ್ರಿಯೆ ಆರಂಭವಾಗಲಿದ್ದು, ಯಾವುದೇ ಶುಲ್ಕವಿಲ್ಲದೆ ಗುಣಮಟ್ಟದ ಶಿಕ್ಷಣ ನೀಡುವ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ರಾಜ್ಯದ 188 ಸರ್ಕಾರಿ ಶಾಲೆಗಳಲ್ಲಿ ಈ ವರ್ಷ ಒಬ್ಬ ವಿದ್ಯಾರ್ಥಿಯೂ ದಾಖಲಾಗಿಲ್ಲ. ಇದರಲ್ಲಿ ತುಮಕೂರು (45 ಶಾಲೆ) ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ಕಲಬುರಗಿ ಹಾಗೂ ಕೋಲಾರ ನಂತರದ ಸ್ಥಾನದಲ್ಲಿವೆ. 2018ರಲ್ಲಿ 3,450 ಇದ್ದ ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ ಈಗ 6,675ಕ್ಕೆ ಏರಿಕೆಯಾಗಿದೆ.
ಸದ್ಯ ರಾಜ್ಯದಲ್ಲಿ 60 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. 2028ರ ವೇಳೆಗೆ ಇನ್ನೂ 28 ಸಾವಿರ ಶಿಕ್ಷಕರು ನಿವೃತ್ತರಾಗಲಿದ್ದು, ಇದು ವ್ಯವಸ್ಥೆಯ ಮೇಲೆ ಮತ್ತಷ್ಟು ಒತ್ತಡ ಹೇರಲಿದೆ.
ನಿಯಮದ ಪ್ರಕಾರ ಕನಿಷ್ಠ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರಿರಬೇಕು ಎಂಬ ಆದೇಶವಿದ್ದರೂ, ಪ್ರಾಯೋಗಿಕವಾಗಿ ಶಿಕ್ಷಕರ ಕೊರತೆಯಿಂದಾಗಿ ಇದು ಸಾಧ್ಯವಾಗುತ್ತಿಲ್ಲ. ಈ ಸವಾಲುಗಳ ನಡುವೆ ಇಲಾಖೆಯ ಹೊಸ ಕೊಡುಗೆಗಳು ದಾಖಲಾತಿ ಸಂಖ್ಯೆಯನ್ನು ಎಷ್ಟು ಹೆಚ್ಚಿಸಲಿವೆ ಎಂಬುದನ್ನು ಕಾದು ನೋಡಬೇಕಿದೆ.


