ಸಂಜೆಯ ಹೊತ್ತಿನಲ್ಲಿ ಏನಾದರೂ ಸಿಹಿ ತಿಂಡಿ ತಿನ್ನಬೇಕೆನ್ನುವ ಆಸೆ. ಆದ್ರೆ ಅದಕ್ಕಾಗಿ ಗ್ಯಾಸ್ ಮುಂದೆ, ಹೆಚ್ಚಿನ ಸಮಯ ಕಳೆಯಬೇಕೆಂದರೆ ತಿನ್ನೋದೇ ಬೇಡ ಅನ್ನಿಸುತ್ತದೆ. ಅಂಥ ಸಂದರ್ಭಕ್ಕೆ ಪರಿಹಾರವೇ ಈ Apple Mug Cake. ಒಂದು ಕಪ್, ಕೆಲವು ಸರಳ ಪದಾರ್ಥಗಳು ಮತ್ತು ಕೆಲವೇ ನಿಮಿಷಗಳು ಸಾಕು.
ಬೇಕಾಗುವ ಪದಾರ್ಥಗಳು
ಸಣ್ಣ ಗಾತ್ರದ ಸೇಬು – 1
ಗೋಧಿಹಿಟ್ಟು ಅಥವಾ ಮೈದಾ – 4 ಟೇಬಲ್‌ಸ್ಪೂನ್
ಸಕ್ಕರೆ ಅಥವಾ ಜೇನು – 2 ಟೇಬಲ್‌ಸ್ಪೂನ್
ಬೇಕಿಂಗ್ ಪೌಡರ್ – ¼ ಟೀಸ್ಪೂನ್
ಹಾಲು – 3 ಟೇಬಲ್‌ಸ್ಪೂನ್
ಎಣ್ಣೆ ಅಥವಾ ಕರಗಿಸಿದ ಬೆಣ್ಣೆ – 2 ಟೇಬಲ್‌ಸ್ಪೂನ್
ದಾಲ್ಚಿನ್ನಿ ಪುಡಿ – ಒಂದು ಚಿಟಿಕೆ
ವ್ಯಾನಿಲ್ಲಾ ಎಸೆನ್ಸ್ – 2 ಹನಿಗಳು
ತಯಾರಿಸುವ ವಿಧಾನ
ಮೈಕ್ರೋವೇವ್‌ಗೆ ಬಳಸಬಹುದಾದ ಒಂದು ಮಗ್ಗನ್ನು ತೆಗೆದುಕೊಳ್ಳಿ. ಅದರಲ್ಲಿ ಗೋಧಿಹಿಟ್ಟು, ಸಕ್ಕರೆ, ಬೇಕಿಂಗ್ ಪೌಡರ್ ಮತ್ತು ದಾಲ್ಚಿನ್ನಿ ಪುಡಿಯನ್ನು ಚೆನ್ನಾಗಿ ಮಿಶ್ರಣ ಮಾಡಿ. ಈಗ ಹಾಲು, ಎಣ್ಣೆ ಮತ್ತು ವ್ಯಾನಿಲ್ಲಾ ಎಸೆನ್ಸ್ ಸೇರಿಸಿ ಗಂಟಾಗದಂತೆ ಕಲಸಿ. ಕೊನೆಗೆ ಕತ್ತರಿಸಿದ ಸೇಬಿನ ತುಂಡುಗಳನ್ನು ಸೇರಿಸಿ ನಿಧಾನವಾಗಿ ಮಿಕ್ಸ್ ಮಾಡಿ.
ಈ ಮಗ್ಗನ್ನು ಮೈಕ್ರೋವೇವ್‌ನಲ್ಲಿ ಸುಮಾರು 1½ ರಿಂದ 2 ನಿಮಿಷಗಳವರೆಗೆ ಹೈ ಪವರ್‌ನಲ್ಲಿ ಬೇಯಿಸಿ. ಕೇಕ್ ಮೇಲ್ಭಾಗ ಒಣಗಿದಂತೆ ಕಂಡುಬಂದರೆ ಸಾಕು. ಹೊರತೆಗೆದು ಸ್ವಲ್ಪ ತಣ್ಣಗಾದ ನಂತರ ಸವಿಯಿರಿ.


