ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರರಂಗವನ್ನು ಗೆದ್ದಲಿನಂತೆ ಕಾಡುತ್ತಿರುವ ‘ಪೈರಸಿ’ ವಿರುದ್ಧ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ನಡೆಸಿದ ಸಂಸತ್ತಿನ ಹೋರಾಟಕ್ಕೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಸಿನಿಮಾ ಪೈರಸಿಯನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದು, ಜಗ್ಗೇಶ್ ಈ ಸಂತಸದ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ರಾಜ್ಯಸಭೆಯ ಶೂನ್ಯ ವೇಳೆಯಲ್ಲಿ ಜಗ್ಗೇಶ್ ಅವರು ಪೈರಸಿ ಕಳ್ಳರ ಹಾವಳಿಯ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಸರ್ಕಾರ, ಆಧುನಿಕ ತಂತ್ರಜ್ಞಾನವನ್ನು ಬಳಸಿ ಪೈರಸಿ ಮಾಡುವವರನ್ನು ಪತ್ತೆಹಚ್ಚುವುದು, ಸಿನಿಮಾ ಪೈರಸಿ ಆ್ಯಪ್ಗಳನ್ನು ನಿಷೇಧಿಸುವುದು ಹಾಗೂ ತಪ್ಪಿತಸ್ಥರಿಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ.
ಈ ಗೆಲುವಿನ ಸಂಭ್ರಮದ ನಡುವೆಯೂ ಜಗ್ಗೇಶ್ ಅವರು ಚಿತ್ರರಂಗದ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. “ಕಳೆದ 45 ವರ್ಷಗಳಿಂದ ಚಿತ್ರರಂಗದ ಅನ್ನ ಉಣ್ಣುತ್ತಿದ್ದೇನೆ. ಅದರ ಋಣ ತೀರಿಸುವ ಉದ್ದೇಶದಿಂದ ನಾನು ಮಾಡಿದ ಈ ಹೋರಾಟಕ್ಕೆ ಭಾಮಾ ಹರೀಶ್, ಬಣಕಾರ್ ಮತ್ತು ಅನಿಲ್ ಯಾದವ್ ಅವರಂತಹ ಕೆಲವರನ್ನು ಹೊರತುಪಡಿಸಿ, ಚಿತ್ರರಂಗದ ಮತ್ಯಾರೂ ಬೆಂಬಲ ನೀಡಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ನನ್ನ ಜೀವನದ ಪ್ರತಿ ಘಟ್ಟದಲ್ಲೂ ನಾನು ಏಕಾಂಗಿಯಾಗಿ ಹೋರಾಡಿ ಇಲ್ಲಿಯವರೆಗೆ ಬಂದಿದ್ದೇನೆ. ಕನ್ನಡಿಗರ ಆಶೀರ್ವಾದ ನನಗೆ ಶ್ರೀರಕ್ಷೆಯಾಗಿದೆ. ನನ್ನ ಕೊನೆಯ ಉಸಿರಿರುವವರೆಗೂ ರಾಘವೇಂದ್ರ ಸ್ವಾಮಿಗಳ ಆಶೀರ್ವಾದದೊಂದಿಗೆ ಉತ್ತಮ ಕಾರ್ಯಗಳನ್ನು ಮಾಡುತ್ತಲೇ ಇರುತ್ತೇನೆ” ಎಂದು ಜಗ್ಗೇಶ್ ಭಾವುಕರಾಗಿ ಬರೆದುಕೊಂಡಿದ್ದಾರೆ.


