ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಎರಡನೇ ಮದುವೆಯ ವ್ಯಾಮೋಹಕ್ಕಾಗಿ ಪತಿಯೊಬ್ಬ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಪಂಡರಹಳ್ಳಿ ಕ್ಯಾಂಪ್‌ನಲ್ಲಿ ನಡೆದಿದೆ.
ಜನವರಿ 11ರಂದು ಈ ಘಟನೆ ನಡೆದಿದ್ದು, ಚಂದನಾಬಾಯಿ (ಪತ್ನಿ) ಎಂಬುವವರನ್ನು ಪತಿ ಗೋಪಿ ಮನೆಯಲ್ಲೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಆರಂಭದಲ್ಲಿ ಇದಕ್ಕೂ ತನಗೂ ಸಂಬಂಧವಿಲ್ಲ ಎಂಬಂತೆ ನಾಟಕವಾಡಿದ್ದ ಗೋಪಿ, ಹೊಳೆಹೊನ್ನೂರು ಪೊಲೀಸರು ನಡೆಸಿದ ಚುರುಕಿನ ತನಿಖೆಯಿಂದಾಗಿ ಇದೀಗ ಸಿಕ್ಕಿಬಿದ್ದಿದ್ದಾನೆ.
ಡಿ.ಬಿ.ಹಳ್ಳಿಯ ಲಂಬಾಣಿ ಸಮುದಾಯದ ಚಂದನಾಬಾಯಿ ಹಾಗೂ ಪಂಡರಹಳ್ಳಿಯ ಬೋವಿ ಸಮುದಾಯದ ಗೋಪಿ ಪರಸ್ಪರ ಪ್ರೀತಿಸುತ್ತಿದ್ದರು. ಅಂತರಜಾತಿ ವಿವಾಹವಾಗಿದ್ದ ಈ ಜೋಡಿ ಮನೆಯವರಿಂದ ದೂರವಾಗಿ ಓಡಿಹೋಗಿ ಮದುವೆಯಾಗಿದ್ದರು. ಬಳಿಕ ಊರಿಗೆ ಮರಳಿ ಸಂಸಾರ ಹೂಡಿದ್ದ ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಸುಂದರವಾಗಿದ್ದ ಸಂಸಾರದಲ್ಲಿ ಬಿರುಕು ಮೂಡಿದ್ದು ಗೋಪಿಯ ಎರಡನೇ ಪ್ರೇಮ ಪುರಾಣದಿಂದ. ಮತ್ತೊಬ್ಬ ಯುವತಿಯನ್ನು ಪ್ರೀತಿಸುತ್ತಿದ್ದ ಗೋಪಿ, ಆಕೆಯನ್ನು ಮದುವೆಯಾಗಲು ಸಿದ್ಧತೆ ನಡೆಸಿದ್ದ. ಇದನ್ನು ಪತ್ನಿ ಚಂದನಾಬಾಯಿ ಬಲವಾಗಿ ವಿರೋಧಿಸಿದ್ದರು. ಇದೇ ದ್ವೇಷದಲ್ಲಿ ಪತ್ನಿಯನ್ನು ಹತ್ಯೆ ಮಾಡಿರುವ ಗೋಪಿ, ಸಾಕ್ಷಿ ನಾಶಪಡಿಸಲು ಯತ್ನಿಸಿದ್ದರೂ ಪೊಲೀಸರ ತನಿಖೆಯ ಮುಂದೆ ಬಣ್ಣ ಬಯಲಾಗಿದೆ.
ಪತಿಯ ವಿಕೃತ ಆಸೆಗೆ ಚಂದನಾಬಾಯಿ ಬಲಿಯಾಗಿದ್ದು, ಇಬ್ಬರು ಹಸುಗೂಸುಗಳು ಈಗ ಅಮ್ಮನೂ ಇಲ್ಲದೆ, ಅಪ್ಪನೂ ಹತ್ತಿರವಿಲ್ಲದೆ ಅನಾಥವಾಗಿವೆ.


