ಹೊಸದಿಗಂತ ಬಳ್ಳಾರಿ:
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಆರೋಪಿಸಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜಂಟಿ ಹೋರಾಟಕ್ಕೆ ಮುಂದಾಗಿವೆ. ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಮತ್ತು ಗುಂಡಿನ ದಾಳಿ ಪ್ರಕರಣವನ್ನು ಖಂಡಿಸಿ ಜನವರಿ 17 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಎಪಿಎಂಸಿ ಆವರಣದಲ್ಲಿ ‘ಬೃಹತ್ ಸಮಾವೇಶ’ ಹಮ್ಮಿಕೊಳ್ಳಲಾಗಿದೆ.
ಗಂಗಾವತಿ ಶಾಸಕ ಗಾಲಿ ಜನಾರ್ಧನ್ ರೆಡ್ಡಿ ಅವರ ನಿವಾಸದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎನ್. ರವಿ ಕುಮಾರ್, “ಸಿಎಂ ಸಿದ್ದರಾಮಯ್ಯ ಅವರು ಸದಾ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ. ಆದರೆ ಬಳ್ಳಾರಿಯಲ್ಲಿ ಶಾಸಕರ ಮೇಲೆ ಹಲ್ಲೆ, ದಬ್ಬಾಳಿಕೆ ನಡೆಯುತ್ತಿದ್ದರೂ ಸರ್ಕಾರ ಮೌನವಾಗಿದೆ. ಇಡೀ ಬಳ್ಳಾರಿಯನ್ನು ಭಸ್ಮ ಮಾಡುತ್ತಿದ್ದೆ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ ಶಾಸಕ ನಾರಾ ಭರತ್ ರೆಡ್ಡಿ ಅವರನ್ನು ಇನ್ನು ಏಕೆ ಬಂಧಿಸಿಲ್ಲ? ಸಾಮಾನ್ಯ ಕಾರ್ಯಕರ್ತರ ಮೇಲೆ ಕೇಸ್ ಹಾಕುವ ಪೊಲೀಸರು ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ಕಾಂಗ್ರೆಸ್‌ನ ಗೂಂಡಾ ಸಂಸ್ಕೃತಿಗೆ ಸಾಕ್ಷಿ” ಎಂದು ಕಿಡಿಕಾರಿದರು.
ಈ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಚಲುವಾದಿ ನಾರಾಯಣ ಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಎಚ್.ಡಿ. ಕುಮಾರಸ್ವಾಮಿ ಹಾಗೂ ವಿ. ಸೋಮಣ್ಣ ಅವರಿಗೂ ಆಹ್ವಾನ ನೀಡಲಾಗಿದೆ.
ಇದೇ ವೇಳೆ ಮಾತನಾಡಿದ ಗಾಲಿ ಜನಾರ್ಧನ್ ರೆಡ್ಡಿ ಅವರು, “ಸಮಾವೇಶಕ್ಕಾಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಮಾರು 30 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ಸಿಐಡಿ ತನಿಖೆಯಿಂದ ನಮಗೆ ನ್ಯಾಯ ಸಿಗುವ ಭರವಸೆಯಿಲ್ಲ, ಈ ಪ್ರಕರಣವನ್ನು ಸಿಬಿಐ ಅಥವಾ ಹಾಲಿ ನ್ಯಾಯಾಧೀಶರ ಮೂಲಕ ತನಿಖೆ ನಡೆಸಬೇಕು” ಎಂದು ಒತ್ತಾಯಿಸಿದರು.
“ಜ.17 ರಂದು ನಡೆಯುವ ಕೋರ್ ಕಮಿಟಿ ಸಭೆಯಲ್ಲಿ ಬಳ್ಳಾರಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ವರಿಷ್ಠರ ಅನುಮತಿ ಪಡೆದು ಹೋರಾಟವನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು” ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಸಣ್ಣ ಫಕೀರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೊಕ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


